ಇಂದೋರ್ ದೇವಸ್ಥಾನದ ಮೆಟ್ಟಿಲುಬಾವಿ ಕುಸಿತ: ಮೃತಪಟ್ಟವರ ಸಂಖ್ಯೆ 35ಕ್ಕೇರಿಕೆ

Update: 2023-03-31 04:43 GMT

ಇಂದೋರ್: ಮಧ್ಯಪ್ರದೇಶದ ಇಂದೋರ್‌ನ ದೇವಸ್ಥಾನವೊಂದರಲ್ಲಿ ರಾಮನವಮಿಯ  ವೇಳೆ ಗುರುವಾರ ಮೆಟ್ಟಿಲುಬಾವಿಯ ಮೇಲ್ಛಾವಣಿ ಕುಸಿದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ  35 ಕ್ಕೆ ಏರಿಕೆಯಾಗಿದೆ.

ರಾಮನವಮಿಯಂದು ಹೆಚ್ಚಿನ ಜನಸಂದಣಿಯ ಭಾರವನ್ನುತಡೆಯಲಾಗದೆ  ಬೆಳೇಶ್ವರ ಮಹಾದೇವ ದೇವಾಲಯದ ಮೆಟ್ಟಿಲುಬಾವಿಯ ಛಾವಣಿಯು ಕುಸಿದುಬಿದ್ದಿತ್ತು.

"ಒಟ್ಟು 35 ಜನರು ಸಾವನ್ನಪ್ಪಿದ್ದಾರೆ, ಒಬ್ಬರು ನಾಪತ್ತೆಯಾಗಿದ್ದಾರೆ ಹಾಗೂ  14 ಜನರನ್ನು ರಕ್ಷಿಸಲಾಗಿದೆ. ಇಬ್ಬರು ಚಿಕಿತ್ಸೆ ಪಡೆದ ನಂತರ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಕಾಣೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಇಂದೋರ್ ಕಲೆಕ್ಟರ್ ಇಳಯರಾಜ ಟಿ. ಹೇಳಿದ್ದಾರೆಂದು , ಸುದ್ದಿ ಸಂಸ್ಥೆ ANI  ವರದಿ ಮಾಡಿದೆ.

"18 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯು ಗುರುವಾರ ಸುಮಾರು 12:30 ಕ್ಕೆ ಆರಂಭವಾಯಿತು ಹಾಗೂ  ಇನ್ನೂ ಮುಂದುವರೆದಿದೆ" ಎಂದು ಇಳಯರಾಜ ಹೇಳಿದರು.

ಖಾಸಗಿ ಟ್ರಸ್ಟ್‌ನಿಂದ ನಿರ್ವಹಿಸಲ್ಪಡುವ ಈ ದೇವಾಲಯವು ಇಂದೋರ್‌ನ ಅತ್ಯಂತ ಹಳೆಯ ವಸತಿ ಕಾಲೋನಿಗಳಲ್ಲಿ ಒಂದಾದ ಸ್ನೇಹ್ ನಗರದಲ್ಲಿದೆ. ನಿವಾಸಿಗಳು ನೀಡಿದ ದೂರಿನ ಮೇರೆಗೆ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಕ್ರಮ ಕೈಗೊಂಡಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದು ಮೂಲಗಳು ತಿಳಿಸಿವೆ.

Similar News