ಮಹಾರಾಷ್ಟ್ರ: ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ; ಓರ್ವ ಬಲಿ

Update: 2023-03-31 05:52 GMT

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಗುರುವಾರ ರಾಮನವಮಿ ಸಂದರ್ಭದಲ್ಲಿ ಉಂಟಾದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಹೌರಾ ಮತ್ತು ಗುಜರಾತ್‌ನ ವಡೋದರದಲ್ಲಿ ಕೂಡಾ ಘರ್ಷಣೆ ಸಂಭವಿಸಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಸಂಭಾಜಿನಗರದಲ್ಲಿ ಹಿಂಸಾಚಾರದಿಂದ 14 ಮಂದಿ ಪೊಲೀಸರಿಗೆ ಗಾಯಗಳಾಗಿವೆ. ಎರಡು ಗುಂಪುಗಳು ಕಲ್ಲು ತೂರಾಟ ಮತ್ತು ದೊಂಬಿಯಲ್ಲಿ ತೊಡಗಿದ್ದು, 13 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಹೌರಾದ ಶಿವಪುರದಲ್ಲಿ ರಾಮನವಮಿ ಮೆರವಣಿಗೆ ವೇಳೆ ಸಂಘರ್ಷ ನಡೆದಿದ್ದು, ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಲಾಠಿ ಪ್ರಹಾರ ನಡೆಸಿದರು. ಗುಜರಾತ್‌ನ ವಡೋದರದಲ್ಲಿ ರಾಮನವಮಿ ಮೆರವಣಿಗೆಯಲ್ಲಿದ್ದ ಇಬ್ಬರಿಗೆ ಕಲ್ಲೇಟು ತಲುಗಿದೆ ಎಂದು ವರದಿಯಾಗಿದೆ.

ಮಹಾರಾಷ್ಟ್ರ ಘಟನೆ ಸಂಬಂಧ 500ಕ್ಕೂ ಹೆಚ್ಚು ಮಂದಿಯ ವಿರುದ್ಧ ದೊಂಬಿ ಪ್ರಕರಣ ದಾಖಲಿಸಲಾಗಿದೆ. ದೊಂಬಿನಿರತರನ್ನು ಚದುರಿಸಲು ಪೊಲೀಸರು 11 ಸುತ್ತು ಗುಂಡು ಹಾರಾಟ ನಡೆಸಿದರು. ಆಶ್ರುವಾಯು ಮತ್ತು ಪ್ಲಾಸ್ಟಿಕ್ ಗುಂಡುಗಳಿಗೆ ಗುಂಪು ಚದುರದೇ ಇದ್ದಾಗ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಈ ಘಟನೆ ಬಗ್ಗೆ ತನಿಖೆ ಆದೇಶಿಸಲಾಗಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಕುಲವಂತ್ ಕುಮಾರ್ ಸಾರಂಗಲ್ ಎಚ್ಚರಿಕೆ ನೀಡಿದ್ದಾರೆ.

Similar News