ರಾಜಕೀಯ ನಿವೃತ್ತಿ ವದಂತಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದೇನು?

Update: 2023-03-31 06:08 GMT

ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ತಾವು ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಮಾಧ್ಯಮಗಳಲ್ಲಿನ ವರದಿಯನ್ನು ಗುರುವಾರ ಅಲ್ಲಗಳೆದಿದ್ದು, ಈ ವಿಷಯದ ಬಗ್ಗೆ ಹೊಣೆಗಾರಿಕೆಯಿಂದ ವರದಿ ಮಾಡುವಂತೆ ಮಾಧ್ಯಮಗಳಿಗೆ ತಾಕೀತು ಮಾಡಿದ್ದಾರೆ.

ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-66) ಕಾಮಗಾರಿ ಪ್ರಗತಿ ಕುರಿತು ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ, ನಿತಿನ್ ಗಡ್ಕರಿ ರಾಜಕಾರಣದಿಂದ ನಿವೃತ್ತರಾಗುತ್ತಾರೆ ಎಂಬ ವದಂತಿಯ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಅವರು, "ನನಗೆ ರಾಜಕಾರಣದಿಂದ ನಿವೃತ್ತಿಯಾಗುವ ಯಾವ ಇರಾದೆಯೂ ಇಲ್ಲ ಹಾಗೂ ಮಾಧ್ಯಮಗಳು ಈ ವಿಷಯದ ಕುರಿತು ಹೊಣೆಗಾರಿಕೆಯಿಂದ ವರದಿ ಮಾಡಬೇಕು" ಎಂದು ರಾಜಕೀಯ ಅತೃಪ್ತಿಯ ಸೂಚನೆ ನೀಡಿದ ಬೆನ್ನಿಗೇ ತಾಕೀತು ಮಾಡಿದ್ದಾರೆ ಎಂದು hindustantimes.com ವರದಿ ಮಾಡಿದೆ.

ನಾನು ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಜನರು ನನಗೆ ಮತ ನೀಡದಿದ್ದರೂ ಪರವಾಗಿಲ್ಲ. ಅದರಿಂದ ನನಗೆ ಮಣ್ಣಿನ ಸಂರಕ್ಷಣೆ, ಹವಾಮಾನ ಬದಲಾವಣೆ ಹಾಗೂ ನಿರುಪಯೋಗಿ ಭೂಮಿಯ ಕುರಿತು ಕೆಲಸ ಮಾಡಲು ಹೆಚ್ಚು ಸಮಯಾವಕಾಶ ದೊತೆಯುತ್ತದೆಂದು ರವಿವಾರ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದರು.

ನಾಗಪುರದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ್ದ ಅವರು, ಮಣ್ಣು ಸಂರಕ್ಷಣೆ, ಹವಾಮಾನ ಬದಲಾವಣೆ ಹಾಗೂ ನಿರುಪಯೋಗಿ ಭೂಮಿ ವಲಯದಲ್ಲಿ ಕೆಲಸ ಮಾಡಲು ಸಾಕಷ್ಟು ಅವಕಾಶವಿದೆ ಎಂದು ಪ್ರತಿಪಾದಿಸಿದ್ದರು.

"ನಾನು ಅದನ್ನು ಮಾಡಲು ಬಯಸುತ್ತೇನೆ ಮತ್ತು ಕೆಲವೊಮ್ಮೆ ಬಲವಂತವಾಗಿ ಮಾಡುತ್ತೇನೆ. ನಾನು ಈಗಾಗಲೇ ಇನ್ನು ಸಾಕು ಎಂದು ಜನರಿಗೆ ತಿಳಿಸಿದ್ದು, ನಿಮಗೆ ನನ್ನ ಬಗ್ಗೆ ಸಮ್ಮತಿಯಿದ್ದರೆ ಮತ ನೀಡಿ ಇಲ್ಲವಾದರೆ ಬೇಡ ಎಂದು ಹೇಳಿದ್ದೇನೆ" ಎಂದು ಹೇಳಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಿಕಟ ಸಂಪರ್ಕ ಹೊಂದಿರುವ ರಾಜಕಾರಣಿ ನಿತಿನ್ ಗಡ್ಕರಿ ಅವರ ಮೇಲಿನ ಹೇಳಿಕೆಯು, ಬಿಜೆಪಿಯ ವರಿಷ್ಠರೊಂದಿಗೆ ಇತ್ತೀಚಿನ ದಿನಗಳಲ್ಲಿ ಸಂಬಂಧ ಬಿಗಡಾಯಿಸಿರುವುದರ ಕುರಿತ ಅತೃಪ್ತಿ ಎಂದು ರಾಜಕೀಯ ವಲಯಗಳು ವ್ಯಾಖ್ಯಾನಿಸಿದ್ದವು. ಇದರ ಬೆನ್ನಿಗೇ ತಮ್ಮ ರಾಜಕೀಯ ನಿವೃತ್ತಿ ಕುರಿತ ಮಾಧ್ಯಮ ವರದಿಗಳನ್ನು ನಿತಿನ್ ಗಡ್ಕರಿ ಅಲ್ಲಗಳೆದಿದ್ದಾರೆ.

ಈ ನಡುವೆ, ನಿತಿನ್ ಗಡ್ಕರಿ ಅವರ ನಿಕಟವರವತಿಯೋರ್ವರು ಗಡ್ಕರಿ ಅವರ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸದಂತೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:  ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್‌ ಅಂಟಿಸಿದ ಆರೋಪ: 8 ಮಂದಿಯ ಬಂಧನ

Similar News