ಧಾರ್ಮಿಕ, ಮದುವೆ ಸಮಾರಂಭಗಳಲ್ಲಿ ಮತಯಾಚಿಸುವಂತಿಲ್ಲ: ಉಡುಪಿ ಕ್ಷೇತ್ರ ಚುನಾವಣಾಧಿಕಾರಿ ಸೀತಾ ಎಂ.ಸಿ.

Update: 2023-03-31 13:45 GMT

ಉಡುಪಿ, ಮಾ.31: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಲ, ಯಕ್ಷಗಾನ ಸೇರಿದಂತೆ ಧಾರ್ಮಿಕ ಹಾಗೂ ಇತರ ಸಮಾರಂಭಗಳಿಗೆ ಅನುಮತಿ ಕೋರಿ ಈವರೆಗೆ ಒಟ್ಟು 56 ಅರ್ಜಿಗಳು ಸಲ್ಲಿಕೆಯಾಗಿದ್ದು, ಇಂತಹ ಕಾರ್ಯ ಕ್ರಮದಲ್ಲಿ ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ತಾಲೂಕು ತಹಶೀಲ್ದಾರ್ ಹಾಗೂ ಕ್ಷೇತ್ರದ ಚುನಾವಣಾಧಿಕಾರಿ ಸೀತಾ ಎಂ.ಸಿ. ತಿಳಿಸಿದ್ದಾರೆ.

ಉಡುಪಿ ತಾಲೂಕು ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಸಭೆ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಸಭೆ, ಪ್ರಚಾರ ಸಭೆ ನಡೆಸಲು ಸಾರ್ವಜನಿಕರು, ರಾಜಕೀಯ ಪಕ್ಷದವರು ಅನುಮತಿ ಪಡೆದು ಕೊಳ್ಳಬೇಕು. ಅದಕ್ಕಾಗಿ ತಾಲೂಕು ಕಚೇರಿಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ಕಾರ್ಯಕ್ರಮದಲ್ಲೂ ಬೆಳಗ್ಗೆ 6ಗಂಟೆ ಯಿಂದ ರಾತ್ರಿ 10ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡ ಲಾಗುವುದು ಎಂದರು.

ಧಾರ್ಮಿಕ, ಮದುವೆ ಸಮಾರಂಭದಲ್ಲಿ ಭಾಗವಹಿಸುವ ರಾಜಕೀಯ ನಾಯಕರು ಮತಯಾಚನೆ ಮಾಡುವಂತಿಲ್ಲ. ಈ ಬಗ್ಗೆ ದೂರು ಬಂದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು, ಕ್ಷೇತ್ರಕ್ಕೆ ಸಂಬಂಧಿಸಿದಂತೆ ಫ್ಲೈಯಿಂಗ್ ಸ್ಕ್ವಾಡ್ ಟೀಮ್ ವಿಡಿಯೋ ಸರ್ವಲೆನ್ಸ್ ತಂಡಗಳನ್ನು ರಚಿಸಿ ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಾಣಾ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಲಿಖಿತ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ದೂರು ದಾಖಲಿಸಬಹುದು ಎಂದರು.

ಜಿಲ್ಲಾ ನೊಡೆಲ್ ಅಧಿಕಾರಿ ಪ್ರಸನ್ನ ಎಚ್.(ಮೊ-9480878000) ಹಾಗೂ ಉಡುಪಿ ಕ್ಷೇತ್ರ ಎಂಸಿಸಿ ನೊಡೆಲ್ ಅಧಿಕಾರಿ ವಿಜಯಾ(ಮೊ-948015 4543) ಅವರನ್ನು ಸಂಪರ್ಕಿಸ ಬಹುದು. ಚುನಾವಣೆ ಸಂಬಂಧ ದೂರುಗಳನ್ನು ಸ್ವೀಕರಿಸಲು ಉಡುಪಿ ತಾಲೂಕು ಆಡಳಿತ ಸೌಧದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಇದರ ದೂರವಾಣಿ ಸಂಖ್ಯೆ 0820-2001090 ದಿನದ 24ಗಂಟೆಗಳು ಕಾರ್ಯಾಚರಿಸುತ್ತಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

‘ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 103704 ಪುರುಷ, 110945 ಮಹಿಳೆ ಯರು ಸೇರಿದಂತೆ ಒಟ್ಟು 214650 ಮಂದಿ ಮತದಾರರಿದ್ದಾರೆ. ಇದರಲ್ಲಿ 18-19ವರ್ಷ ವಯೋಮಿತಿಯ ಒಟ್ಟು 3437 ಯುವ ಮತದಾರರು, ವಿಕಲಚೇತನರು 1805 ಹಾಗೂ 80ವರ್ಷ ಮೇಲ್ಪಟ್ಟ 7827 ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 226 ಮತಗಟ್ಟೆಗಳಿವೆ. ಕ್ಷೇತ್ರ ವ್ಯಾಪ್ತಿಯ ನೇಜಾರು, ಉದ್ಯಾವರ ಬಲೈಪಾದೆ ಹಾಗೂ ಅಲೆವೂರಿನಲ್ಲಿ ಚೆಕ್‌ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ’
-ಸೀತಾ ಎಂ.ಸಿ., ಚುನಾವಣಾಧಿಕಾರಿ

Similar News