​ಐಪಿಎಲ್‌ನ ಪ್ರಪ್ರಥಮ ’ಇಂಪ್ಯಾಕ್ಟ್ ಪ್ಲೇಯರ್’ ಯಾರು ಗೊತ್ತೇ?

Update: 2023-04-01 09:32 GMT

ಅಹ್ಮದಾಬಾದ್: ಇಂಡಿಯನ್ ಪ್ರಿಮಿಯರ್ ಲೀಗ್‌ನ ಮೊಟ್ಟಮೊದಲ ’ಇಂಪ್ಯಾಕ್ಟ್ ಪ್ಲೇಯರ್’ ಎಂಬ ಹೆಗ್ಗಳಿಕೆಗೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ತುಷಾರ್ ದೇಶಪಾಂಡೆ ಪಾತ್ರರಾಗಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಮೊದಲ ಐಪಿಎಲ್ ಪಂದ್ಯದಲ್ಲಿ ಅಂಬಟಿ ರಾಯುಡು ಬದಲು ಅವಕಾಶ ಪಡೆದ ದೇಶಪಾಂಡೆ ಇತಿಹಾಸ ಸೃಷ್ಟಿಸಿದರು.

ಪಂದ್ಯಕ್ಕೆ ಮುನ್ನ ತುಷಾರ್ ದೇಶಪಾಂಡೆ, ಸುಭ್ರಾಂಶು ಸೇಣಾಪತಿ, ಶೇಕ್ ರಶೀದ್, ಅಜಿಂಕ್ಯ ರಹಾನೆ ಹಾಗೂ ನಿಶಾಂತ್ ಸಂಧು ಅವರನ್ನು ಬದಲಿ ಆಟಗಾರರಾಗಿ ಚೆನ್ನೈ ಘೋಷಿಸಿತ್ತು. ಗುಜರಾತ್ ಟೈಟನ್ಸ್, ಬಿ.ಸಾಯಿ ಸುಂದರನ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಅಭಿನವ್ ಮನೋಹರ್ ಹಾಗೂ ಕೆ.ಎಸ್.ಭರತ್ ಅವರ ಹೆಸರನ್ನು ಬದಲಿ ಆಟಗಾರರಾಗಿ ಪ್ರಕಟಿಸಿತ್ತು.

ಈ ಬಾರಿಯ ಐಪಿಎಲ್‌ನಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ, ಇಂಪ್ಯಾಕ್ಟ್ ಪ್ಲೇಯರ್ ಪರಿಕಲ್ಪನೆ ಜಾತಿಗೆ ತಂದಿದೆ. ಪರೀಕ್ಷಾರ್ಥವಾಗಿ ಸೈಯದ್ ಮುಸ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಬಿಸಿಸಿಐ ಈ ಕ್ರಮ ಜಾರಿಗೆ ತಂದಿತ್ತು.

ಇದೇ ಮೊದಲ ಬಾರಿಗೆ ಪಂದ್ಯದ ಟಾಸ್ ಬಳಿಕ ಆಡುವ 11 ಆಟಗಾರರ ಹೆಸರನ್ನು ತಂಡದ ನಾಯಕ ಪಂದ್ಯದ ರೆಫ್ರಿಗೆ ನೀಡಬಹುದಾಗಿದೆ. ’ಇಂಪ್ಯಾಕ್ಟ್ ಪ್ಲೇಯರ್’ ನಿಯಮದಂತೆ ತಂಡದ ಹನ್ನೊಂದು ಸದಸ್ಯರ ಪೈಕಿ ಯಾರೊಬ್ಬರ ಬದಲಿಗಾದರೂ ಬದಲಿ ಆಟಗಾರನನ್ನು ಪಂದ್ಯದ ಯಾವುದೇ ಹಂತದಲ್ಲಿ ಮೈದಾನಕ್ಕೆ ಇಳಿಸಬಹುದು. ಬದಲಿ ಆಟಗಾರ ಬ್ಯಾಟಿಂಗ್, ಬೌಲಿಂಗ್ ಅಥವಾ ಫೀಲ್ಡಿಂಗ್ ಮಾಡಲು ಅವಕಾಶ ಇದೆ. ಆದರೆ ತಂಡದ ನಾಯಕನಾಗಿ ಮಾತ್ರ ಕಾರ್ಯ ನಿರ್ವಹಿಸುವಂತಿಲ್ಲ.

ಜತೆಗೆ ಈ ಬಾರಿಯಿಂದ ವೈಡ್ ಹಾಗೂ ನೋ ಬಾಲ್‌ಗಳಿಗೆ ಕೂಡಾ ಡಿಆರ್‌ಎಸ್ ಅವಕಾಶ ಬಳಸಿಕೊಳ್ಳಬಹುದು.

ಐಪಿಎಲ್ ಪಂದ್ಯದ 90 ನಿಮಿಷ ಅವಧಿಯಲ್ಲಿ 20 ಓವರ್ ಪೂರ್ಣಗೊಳಿಸದಿದ್ದರೆ ತಂಡ ಪೆನಾಲ್ಟಿ ತೆರಬೇಕಾಗುತ್ತದೆ. ಈ ಸಮಯ ಮಿತಿ ಮೀರಿ ಎಸೆಯುವ ಪ್ರತಿ ಎಸೆತಕ್ಕೆ 30 ಯಾರ್ಡ್ ವೃತ್ತದ ಒಳಗೆ ಹೆಚ್ಚುವರಿ ಆಟಗಾರನನ್ನು ನಿಲ್ಲಿಸಬೇಕಾಗುತ್ತದೆ.

Similar News