ಉತ್ತರಪ್ರದೇಶ: ರಾಮನವಮಿ ಮೆರವಣಿಗೆ ವೇಳೆ ಮಸೀದಿ ಸಮೀಪ ಕೇಸರಿ ಧ್ವಜ ಹಾರಿಸಿದ ನಾಲ್ವರ ಸೆರೆ

Update: 2023-04-01 08:49 GMT

ಮಥುರಾ: ರಾಮನವಮಿ ಸಂದರ್ಭದಲ್ಲಿ ಹಲವಾರು ಕಡೆ ಕೋಮುಗಲಭೆ ಸಂಭವಿಸಿದ್ದು, ಇದೀಗ ಮಥುರಾದಲ್ಲಿ ರಾಮನವಮಿ ಶೋಭಾಯಾತ್ರೆಯ ವೇಳೆ ಮಸೀದಿಯ ಸಮೀಪ ಕೇಸರಿ ಧ್ವಜ ಹಾರಿಸಿದ್ದಕ್ಕಾಗಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣವು ಜಮಾಲ್‌ ಮಸೀದಿಯ ಸಮೀಪ ನಡೆದಿದ್ದು, ಶಾಂತಿಭಂಗ ಪ್ರಕರಣದಲ್ಲಿ ಕಾವ್ಯ, ಹನಿ, ರಾಜೇಶ್‌ ಮತ್ತು ದೀಪಕ್‌ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಮಸೀದಿಯ ಸಮೀಪವಿದ್ದ ಕಟ್ಟಡವೊಂದರಲ್ಲಿ ಕೇಸರಿ ಧ್ವಜ ಹಾರಿಸಿದ ಆರೋಪಿಗಳ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದ್ದು, ಹಲವಾರು ಬಳಕೆದಾರರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ವಾಹನದಲ್ಲಿದ್ದ ಈ ನಾಲ್ವರು ಮಸೀದಿ ಬಳಿಯ ಕಟ್ಟಡವನ್ನು ಹತ್ತಿ ಅಲ್ಲಿ ಕೇಸರಿ ಧ್ವಜಗಳನ್ನು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಕೋಮು ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗಿದ್ದು, ಕೂಡಲೇ ಸೂಕ್ತ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

Similar News