ರಾಹುಲ್‌ ಗಾಂಧಿ ವಿರುದ್ಧ ಇನ್ನೊಂದು ಮಾನನಷ್ಟ ಪ್ರಕರಣ ದಾಖಲು

Update: 2023-04-01 12:13 GMT

ಹೊಸದಿಲ್ಲಿ: ಮಾನನಷ್ಟ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ದೋಷಿ ಎಂದು ಘೋಷಿತರಾಗಿ ನಂತರ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಇನ್ನೊಂದು ಮಾನನಷ್ಟ ಪ್ರಕರಣ ದಾಖಲಾಗಿದೆ. ಈ ವರ್ಷದ ಜನವರಿಯಲ್ಲಿ ಭಾರತ್‌ ಜೋಡೋ ಯಾತ್ರೆಯ ವೇಳೆ ಆರೆಸ್ಸೆಸ್‌ (RSS) ಅನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ. ಜನವರಿ 9 ರಂದು ಹರ್ಯಾಣದ ಅಂಬಾಲದಲ್ಲಿ ನಡೆದ ಸಭೆಯೊಂದರಲ್ಲಿ ರಾಹುಲ್‌ ಅವರು ಆರೆಸ್ಸೆಸ್‌ ಸದಸ್ಯರನ್ನು ಪರೋಕ್ಷವಾಗಿ '21ನೇ ಶತಮಾನದ ಕೌರವರು' ಎಂದು ಹೇಳಿದ್ದರು.

ಆರೆಸ್ಸೆಸ್‌ ಕಾರ್ಯಕರ್ತ ಕಮಲ್‌ ಭಡೌರಿಯಾ ಎಂಬವರು ಉತ್ತರಾಖಂಡದ ಹರಿದ್ವಾರ ನ್ಯಾಯಾಲಯದಲ್ಲಿ ತಮ್ಮ ವಕೀಲರು ಮೂಲಕ ಪ್ರಕರಣ ದಾಖಲಿಸಿದ್ದಾರೆ.

"ಕೌರವರು ಯಾರು? ನಾನು ನಿಮಗೆ ಮೊದಲು 21ನೇ ಶತಮಾನದ ಕೌರವರ ಬಗ್ಗೆ ಹೇಳುತ್ತೇನೆ, ಅವರು ಖಾಕಿ ಹಾಫ್‌ ಪ್ಯಾಂಟ್‌ ಧರಿಸುತ್ತಾರೆ, ಕೈಯಲ್ಲಿ ಲಾಠಿ ಹಿಡಿಯುತ್ತಾರೆ ಮತ್ತು ಶಾಖಾಗಳನ್ನು ನಡೆಸುತ್ತಾರೆ: ಭಾರತದ 2-3 ಬಿಲಿಯಾಧಿಪತಿಗಳು ಕೌರವರ ಜೊತೆ ನಿಂತಿದ್ದಾರೆ," ಎಂದು ಆರೆಸ್ಸೆಸ್‌ ಅನ್ನು ಪರೋಕ್ಷವಾಗಿ ಉಲ್ಲೇಖಿಸಿ ರಾಹುಲ್‌ ಹೇಳಿದ್ದರು.

ಈ ಪ್ರಕರಣದ ವಿಚಾರಣೆಯು ಎಪ್ರಿಲ್‌ 12 ಕ್ಕೆ ನಿಗದಿಯಾಗಿದೆ.

ಇದನ್ನೂ ಓದಿ: ರಾಜಕೀಯ ಪ್ರವೇಶದ ವದಂತಿ: ನಟ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?

Similar News