ಉತ್ತರ ಪ್ರದೇಶ: ರಮಝಾನ್ ಪ್ರಾರ್ಥನೆ ನಿಲ್ಲಿಸಲು ನೆರೆಹೊರೆಯವರಿಂದ ಪೊಲೀಸರಿಗೆ ಕರೆ

scroll.in ವರದಿ

Update: 2023-04-01 15:01 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ವಸತಿ ಸಮುಚ್ಚಯವೊಂದರ ಮುಸ್ಲಿಮ್ ನಿವಾಸಿಗಳು ತಮ್ಮ ರಮಝಾನ್ ಪ್ರಾರ್ಥನೆಗಳಿಗೆ ತಮ್ಮದೇ ನೆರೆಹೊರೆಯ ಹಿಂದೂಗಳು ಅಡ್ಡಿಯನ್ನೊಡ್ಡಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಕಳೆದೊಂದು ವಾರದಲ್ಲಿ ಇದು ಉತ್ತರ ಪ್ರದೇಶದಲ್ಲಿ ನಮಾಝ್ ನಿಲ್ಲಿಸಿದ ಮೂರನೇ ಘಟನೆಯಾಗಿದೆ ಎಂದು scroll.in ವರದಿ ಮಾಡಿದೆ.

ಗ್ರೇಟರ್ ನೊಯ್ಡಾದ ಸುಪರ್ಟೆಕ್ ಇಕೋ-ವಿಲೇಜ್ II

ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿಯ ವಾಣಿಜ್ಯ ಕಟ್ಟಡದಲ್ಲಿರುವ ಬಳಕೆಯಾಗದ ಹಾಲ್ ಒಂದರಲ್ಲಿ 30-40 ಮುಸ್ಲಿಮರ ಗುಂಪೊಂದು ಪ್ರತಿ ದಿನ ರಾತ್ರಿ ತರಾವೀಹ್ ನಮಾಝ್ ನಡೆಸುತ್ತಿದ್ದು, ಹೆಚ್ಚಿನವರು ಸಂಕೀರ್ಣದ ನಿವಾಸಿಗಳೇ ಆಗಿದ್ದರು. ಮೊದಲ ಮೂರು ದಿನ ಪ್ರಾರ್ಥನೆ ಸುಗಮವಾಗಿ ನಡೆದಿತ್ತು. ಆದರೆ ನಾಲ್ಕನೇ ದಿನವಾಗಿದ್ದ ಮಾ.26ರಂದು ಸ್ಥಳೀಯ ನಿವಾಸಿ, ವಿಮಾ ಕಂಪನಿಯೊಂದರ ಉಪಾಧ್ಯಕ್ಷ ಮುಹಮ್ಮದ್ ಇಮಾಂ (46) ಅವರಿಗೆ ಕರೆ ಮಾಡಿದ್ದ ಅಪಾರ್ಟ್ಮೆಂಟ್ ಸಂಕೀರ್ಣದ ಭದ್ರತಾ ಅಧಿಕಾರಿ, ನಮಾಝನ್ನು ನಿಲ್ಲಿಸುವಂತೆ ತನಗೆ ಪೊಲೀಸರು ಕರೆ ಮಾಡಿ ಸೂಚಿಸಿದ್ದಾರೆ ಎಂದು ತಿಳಿಸಿದ್ದರು.

ಪೊಲೀಸ್ ಠಾಣೆಯಿಂದ ಬಂದಿದ್ದ ಕರೆ ಮುಸ್ಲಿಮ್ ನಿವಾಸಿಗಳನ್ನು ದಿಗ್ಭ್ರಮೆಗೊಳಿಸಿತ್ತು. ನೆರವಿಗಾಗಿ ಇಮಾಂ ಎಸ್ಪಿ ನಾಯಕ ರಾಜಕುಮಾರ ಭಾಟಿಯವರನ್ನು ಸಂಪರ್ಕಸಿದ್ದರು. ಭಾಟಿ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿದ್ದರು ಮತ್ತು ಅಂದು ರಾತ್ರಿ ನಮಾಝ್ ಮುಂದುವರಿದಿತ್ತು. ಆದರೆ ಮರುದಿನ ಸಂಜೆ ನಮಾಝ್ ಇನ್ನೇನು ಆರಂಭಗೊಳ್ಳಲಿದೆ ಎನ್ನುವಾಗ ಸುಮಾರು 60-70 ಹಿಂದೂ ನಿವಾಸಿಗಳು ಮೈಕ್ರೋಫೋನ್ ಮತ್ತು ಲೌಡ್ ಸ್ಫೀಕರ್ನೊಂದಿಗೆ ಕಟ್ಟಡದ ಹೊರಗೆ ಜಮಾಯಿಸಿ ಹನುಮಾನ್ ಚಾಲಿಸಾ ಪಠಣವನ್ನು ಆರಂಭಿಸಿದ್ದರು. ನಮಾಝ್ ಗೆ ಆಕ್ಷೇಪವನ್ನೊಡ್ಡಿದ್ದ ಅವರು, ಸೊಸೈಟಿಯಲ್ಲಿ ಹೊರಗಿನವರು ಪ್ರಾರ್ಥನೆ ಮಾಡುವುದು ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ವಾದಿಸಿದ್ದರು ಎಂದು scroll.in ವರದಿ ಮಾಡಿದೆ.

‘ನಾವು ಕುಳಿತು ಮಾತನಾಡೋಣ ಮತ್ತು ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಎಂದು ಅವರಿಗೆ ಹೇಳಿದ್ದೆವು, ಆದರೆ ಅವರು ತಮ್ಮ ನಿಲುವಿಗೆ ಅಂಟಿಕೊಂಡಿದ್ದರು’ ಎಂದು ಇಮಾಂ ತಿಳಿಸಿದರು.

‘ಹೊರಗಿನವರು ವಿಶೇಷ ಪ್ರಾರ್ಥನೆಗೆ ಸೇರಿದ ಸ್ನೇಹಿತರು ಮತ್ತು ಬಂಧುಗಳಾಗಿದ್ದಾರೆ. ಅವರು ನಮ್ಮ ಅತಿಥಿಗಳಾಗಿದ್ದಾರೆ ಮತ್ತು ಅವರ ಉಪಸ್ಥಿತಿಯ ಹೊಣೆಯನ್ನು ನಾನು ವಹಿಸಿಕೊಳ್ಳುತ್ತೇನೆ  ಎಂದು ನಾನು ಅವರಿಗೆ ತಿಳಿಸಿದ್ದೆ’ ಎಂದೂ ಇಮಾಂ ಹೇಳಿದರು.

‘ಪೊಲೀಸರೂ ನಮಾಝ್ ಗೆ ಸೇರಿದ್ದವರ ಹೆಸರುಗಳನ್ನು ಕೇಳಿದ್ದರು. ಹೊರಗಿನವರಿಗೆ ಅವಕಾಶ ನೀಡದೇ ನಮಾಝ್ ಮುಂದುವರಿಸಬಹುದು ಎಂದು ಅವರು ತಿಳಿಸಿದ್ದರು. ಆದರೆ ಅದು ಅರ್ಥಹೀನವಾಗಿದ್ದರಿಂದ ನಾವು ಅದಕ್ಕೆ ಒಪ್ಪಲಿಲ್ಲ’ ಎಂದರು.

ಇಷ್ಟಾದ ಬಳಿಕ ಮುಸ್ಲಿಮ್ ನಿವಾಸಿಗಳು ಸೊಸೈಟಿಯಲ್ಲಿ ತರಾವೀಹ್ ನಮಾಝ್ ಅನ್ನು ರದ್ದುಗೊಳಿಸಿದ್ದಾರೆ.

ಘಟನೆಯಲ್ಲಿ ಪೊಲೀಸರ ಯಾವುದೇ ಪಾತ್ರವಿಲ್ಲ ಎಂದು ಹೇಳಿದ ಸೆಂಟ್ರಲ್ ನೋಯ್ಡಾದ ಎಸಿಪಿ ಬೃಜನಂದನ ರಾಯ್, ‘ಇದು ಆಂತರಿಕ ವಿಷಯವಾಗಿದ್ದು ಹೊರಗಿನವರ ಪ್ರವೇಶವನ್ನು ಕೆಲವರು ವಿರೋಧಿಸಿದ್ದಾರೆ. ಈ ವಿಷಯದಲ್ಲಿ ಯಾರೂ ದೂರು ಸಲ್ಲಿಸಿಲ್ಲ. ನಮಾಝ್ ನಡೆಸುವುದನ್ನು ನಾವು ನಿಲ್ಲಿಸಿಲ್ಲ’ ಎಂದು ಸಮಜಾಯಿಷಿ ನೀಡಿದರು.

ಈ ಘಟನೆಗೆ ಎರಡು ದಿನಗಳ ಹಿಂದೆ ಮಾ.24ರಂದು ನೊಯ್ಡಾದ ಇನ್ನೊಂದು ಗೇಟೆಡ್ ಕಮ್ಯುನಿಟಿ ಇಕೋಸಿಟಿ ಅಪಾರ್ಟ್ಮೆಂಟ್ ನಲ್ಲಿಯೂ ಇದೇ ರೀತಿ ನಡೆದಿತ್ತು. ಸೊಸೈಟಿಯ ಕ್ಲಬ್ ನಲ್ಲಿ ತರಾವೀಹ್ ನಮಾಝ್ ಗಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 25 ಮುಸ್ಲಿಮ್ ನಿವಾಸಿಗಳು ಸೇರಿದ್ದರು. ಆದರೆ ಇದನ್ನು ಆಕ್ಷೇಪಿಸಿ ಅವರ ಹಿಂದು ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರಿಗೆ ಸೊಸೈಟಿಯ ಆಡಳಿತದಿಂದ ಪಡೆದಿದ್ದ ಅನುಮತಿಯನ್ನು ತೋರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಾ.1ರಿಂದ ನೋಯ್ಡಾದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪೊಲೀಸರಿಂದ ಅನುಮತಿ ಪಡೆಯುವಂತೆ ಅವರು ತಿಳಿಸಿದ್ದರು. ಅಂದಿನಿಂದ ನಮಾಝ್ ಮನೆಗಳಲ್ಲಿ ನಡೆಯುತ್ತಿದೆ.

ಇದು ಕಳೆದೊಂದು ವಾರದಲ್ಲಿ ಉ.ಪ್ರದೇಶದಲ್ಲಿ  ನಡೆದ ಇಂತಹ ಮೂರನೇ ಘಟನೆಯಾಗಿದೆ. ಮಾ.24ರಂದು ಮೊರಾದಾಬಾದ್ ನ ವಾಣಿಜ್ಯ ಕಟ್ಟಡದ ತಳ ಅಂತಸ್ತಿಗೆ ನುಗ್ಗಿದ್ದ ಬಜರಂಗಿಗಳ ಗುಂಪು ಅಲ್ಲಿ ನಡೆಯುತ್ತಿದ್ದ ನಮಾಝ್ ಗೆ ಅಡ್ಡಿಯುಂಟು ಮಾಡಿತ್ತು. ಬಜರಂಗದಳವು ದೂರು ಸಲ್ಲಿಸಿದ ಬಳಿಕ ಪೊಲೀಸರು ತಮ್ಮ ಮನೆಗಳಲ್ಲಿ ಅಥವಾ ಧಾರ್ಮಿಕ ಸ್ಥಳಗಳಲ್ಲಿ ನಮಾಝ್ ಮಾಡುವಂತೆ ಮುಸ್ಲಿಮರಿಗೆ ತಿಳಿಸಿದ್ದರು.

ಪ್ರದೇಶದಲ್ಲಿ ‘ಶಾಂತಿಯನ್ನು ಕದಡುತ್ತಿರುವುದಕ್ಕಾಗಿ ’ ನಿಮಗೇಕೆ ಐದು ಲ.ರೂ.ದಂಡ ವಿಧಿಸಬಾರದು ಎಂದು ಕೇಳಿ ಪೊಲೀಸರು ತನ್ನ ಗೋದಾಮಿನಲ್ಲಿ ನಮಾಝ್ ಆಯೋಜಿಸಿದ್ದ ಝಾಕಿರ್ ಹುಸೇನ್ಗೆ ನೋಟಿಸನ್ನೂ ನೀಡಿದ್ದರು. ಭವಿಷ್ಯದಲ್ಲಿ ಇಂತಹ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಲಿಖಿತ ಮುಚ್ಚಳಿಕೆ ಸಲ್ಲಿಸುವಂತೆಯೂ ಅವರು ಹುಸೇನ್ಗೆ ಸೂಚಿಸಿದ್ದರು.

ನಮಾಝ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಹೊರಗಿನವರು ಅಥವಾ ಹಿಂದುತ್ವ ಗುಂಪುಗಳಲ್ಲ,ತಮ್ಮದೇ ನೆರೆಹೊರೆಯ ಹಿಂದುಗಳು ಎನ್ನುವುದು ನೋಯ್ಡಾ ಮತ್ತು ಗ್ರೇಟರ್ ನೊಯ್ಡಾ ಸೊಸೈಟಿಗಳ ಮುಸ್ಲಿಮ್ ನಿವಾಸಿಗಳಿಗೆ ದಿಗ್ಭ್ರಮೆಯನ್ನುಂಟು ಮಾಡಿದೆ ಎಂದು scroll.in ವರದಿ ಮಾಡಿದೆ.

‘ಸುಶಿಕ್ಷಿತ ವೃತ್ತಿಪರರಿಂದ ಇಂತಹ ಧರ್ಮಾಂಧತೆಯನ್ನು ನಾವು ನಿರೀಕ್ಷಿಸಿರಲಿಲ್ಲ’ ಎಂದು ಇಕೋಸಿಟಿಯ ನಿವಾಸಿ ಭಕ್ತಾವರ್ ಚಾವ್ಲಾ ಹೇಳಿದರು.

ಹೆಚ್ಚಿನ ಸೊಸೈಟಿ ನಿವಾಸಿಗಳು ಒಳ್ಳೆಯ ಜನರಾಗಿದ್ದಾರೆ ಮತ್ತು ಸೌಹಾರ್ದತೆಯಿಂದ ವಾಸವಾಗಿದ್ದಾರೆ. ಆದರೆ ಬೆರಳೆಣಿಕೆಯ ಜನರಲ್ಲಿ ಮುಸ್ಲಿಮರು ಮತ್ತು ಅವರ ಆಚರಣೆಗಳ ಬಗ್ಗೆ ದ್ವೇಷ ತುಂಬಿರುವುದರಿಂದ ವಿವಾದಗಳನ್ನು ಎಬ್ಬಿಸುತ್ತಿದ್ದಾರೆ ಎಂದು ಗ್ರೇಟರ್ ನೋಯ್ಡಾ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನ ನಿವಾಸಿಯೋರ್ವರು ಹೇಳಿದರು.

ಪೊಲೀಸರು ಕ್ರಮವನ್ನು ಕೈಗೊಳ್ಳಬೇಕಿತ್ತು ಮತ್ತು ಮುಸ್ಲಿಮರು ನಮಾಝ್ ಮಾಡುವುದನ್ನು ನಿಲ್ಲಿಸಿದವರನ್ನು ಬಂಧಿಸಬೇಕಿತ್ತು ಎಂದು ಎಸ್ಪಿ ನಾಯಕ ಭಾಟಿ ಹೇಳಿದರು.

Similar News