ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ಅನುಮತಿ ಕಡ್ಡಾಯ: ಉಡುಪಿ ಡಿಸಿ ಕೂರ್ಮಾರಾವ್

Update: 2023-04-01 15:18 GMT

ಉಡುಪಿ: ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲಿದ್ದು, ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಕೇಬಲ್ ಟಿವಿ, ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾ ಎಂಸಿಎಂಸಿ ಸಮಿತಿಯ ಅನುಮತಿ ಕಡ್ಡಾಯವಾಗಿದೆ. ಸಮಿತಿಯ  ಅನುಮತಿ ಪಡೆಯದೇ ಜಾಹೀರಾತು ಪ್ರಕಟಿಸಿದಲ್ಲಿ ಸಂಬಂಧಪಟ್ಟವರು ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದೆಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ಎಂಸಿಎಂಸಿ ಕಚೇರಿಗೆ ಇಂದು ಭೇಟಿ ನೀಡಿ ಅವರು ಮಾತನಾಡುತ್ತಿದ್ದರು. ಜಾಹೀರಾತುಗಳ ಪ್ರಕಟಣೆ ಬಗ್ಗೆ ಅನುಮತಿ ಪಡೆಯುವ ಕುರಿತಂತೆ ಜಿಲ್ಲಾ ಎಂಸಿಎಂಸಿ ಸಮಿತಿಗೆ ಜಾಹೀರಾತು ಪ್ರಕಟಣೆ ಕೋರಿ ಲಿಖಿತ ಅರ್ಜಿಯನ್ನು ಸಲ್ಲಿಸಿ, ಅಗತ್ಯ ಅನುಮತಿ ಪಡೆದ ನಂತರವೇ ಜಾಹೀರಾತು ಪ್ರಕಟಿಸಬೇಕು ಎಂದು ಹೇಳಿದರು.

ಚುನಾವಣಾ ಪ್ರಚಾರಕ್ಕಾಗಿ ಮುದ್ರಣಗೊಂಡ ಕರಪತ್ರಗಳ ಮೇಲೆ ಅದನ್ನು ಮುದ್ರಣ ಮಾಡಿದ ಮುದ್ರಕರ ಹೆಸರು ಹಾಗೂ ವಿಳಾಸ, ಪ್ರತಿಗಳ ಸಂಖ್ಯೆ ಸೇರಿದಂತೆ ಮತ್ತಿತರ ವಿಷಯಗಳನ್ನು ಕಡ್ಡಾಯವಾಗಿ ಮುದ್ರಿಸಬೇಕು. ಮುದ್ರಣ ಕುರಿತ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ 3 ದಿನಗಳ ಒಳಗಾಗಿ ಹಾಗೂ ಸಾಮಗ್ರಿಯ ಪ್ರತಿಯನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು. ಇದರ ಉಲ್ಲಂಘನೆಯು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಲಿದೆ ಎಂದರು.

ಜಿಲ್ಲಾ ಎಂಸಿಎಂಸಿ ಕಚೇರಿಯನ್ನು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ತೆರೆಯಲಾಗಿದ್ದು, ಜಾಹೀರಾತು ಪ್ರಕಟಣೆ ಕುರಿತಂತೆ ಅನುಮತಿ ಪಡೆಯಲು ಈ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಜಿಲ್ಲಾ ಎಂಸಿಎಂಸಿ ಸಮಿತಿಯ ನೋಡೆಲ್ ಅಧಿಕಾರಿ ಮತ್ತು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಮೇಲ್ವಿಚಾರಕರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.

Similar News