ನಾಳೆಯಿಂದ 10 ದಿನ ಚುನಾವಣಾ ಬಾಂಡ್ ಗಳ ಮಾರಾಟ

Update: 2023-04-01 15:43 GMT

ಹೊಸದಿಲಿ, ಎ. 1: ಎಪ್ರಿಲ್ 3ರಿಂದ 12ರವರೆಗೆ 10 ದಿನಗಳ ಕಾಲ ಭಾರತೀಯ ಸ್ಟೇಟ್ ಬ್ಯಾಂಕ್ ನ ಎಲ್ಲಾ ಅರ್ಹ ಶಾಖೆಗಳಲ್ಲಿ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಲಾಗುವುದು ಎಂದು ಸರಕಾರ ಶುಕ್ರವಾರ ಪ್ರಕಟಿಸಿದೆ. ಇದು ಚುನಾವಣಾ ಬಾಂಡ್ ಗಳ 26ನೇ ಮಾರಾಟವಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಬಾಂಡ್ ಗಳ  ಮಾರಾಟ ನಡೆಯುತ್ತಿದೆಯಾದರೂ, ಪ್ರತಿ ವರ್ಷ ಎಪ್ರಿಲ್ ನಲ್ಲಿ 10 ದಿನಗಳ ಮಾರಾಟವು ಈ ಯೋಜನೆಯ ಒಂದು ಭಾಗವೇ ಆಗಿದೆ. ‘‘ದೇಶದ ರಾಜಕೀಯ ದೇಣಿಗೆ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವುದಕ್ಕಾಗಿ’’ ಚುನಾವಣಾ ಬಾಂಡ್ ಗಳ  ಮಾರಾಟ ಯೋಜನೆಯನ್ನು 2018 ಜನವರಿಯಲ್ಲಿ ಜಾರಿಗೆ ತರಲಾಗಿದೆ.

ಈ ಯೋಜನೆಯ ಭಾಗವಾಗಿ, ಪ್ರತಿ ವರ್ಷ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್ಗಳಲ್ಲಿ 10 ದಿನಗಳ ಕಾಲ ಬಾಂಡ್ ಗಳ  ಮಾರಾಟ ನಡೆಯುತ್ತದೆ. ದಿನಾಂಕಗಳನ್ನು ಕೇಂದ್ರ ಸರಕಾರ ನಿಗದಿಪಡಿಸುತ್ತದೆ. ಅದೂ ಅಲ್ಲದೆ, ಮೂಲ ಯೋಜನೆಯ ಪ್ರಕಾರ, ಲೋಕಸಭಾ ಚುನಾವಣೆಯ ವರ್ಷದಲ್ಲಿ ಹೆಚ್ಚುವರಿ 30 ದಿನಗಳ ಕಾಲ ಬಾಂಡ್ ಗಳನ್ನು ಮಾರಾಟ ಮಾಡಲಾಗುತ್ತದೆ.

ಕಳೆದ ವರ್ಷದ ನವೆಂಬರ್ ನಲ್ಲಿ ಸರಕಾರವು ಈ ಯೋಜನೆಗೆ ತಿದ್ದುಪಡಿಯೊಂದನ್ನು ತಂದಿತು. ರಾಜ್ಯಗಳು ಮತ್ತು ಶಾಸಕಾಂಗ ಸಭೆಗಳಿರುವ ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣೆ ನಡೆಯುವ ವರ್ಷಗಳಲ್ಲಿ ಹೆಚ್ಚುವರಿ 15 ದಿನಗಳ ಕಾಲ ಬಾಂಡ್ ಮಾರಾಟವನ್ನು ನಡೆಸಲು ಈ ತಿದ್ದುಪಡಿಯು ಕೇಂದ್ರ ಸರಕಾರಕ್ಕೆ ಅಧಿಕಾರ ನೀಡುತ್ತದೆ.

ಜನರು ಚುನಾವಣಾ ಬಾಂಡ್ ಗಳನ್ನು ಖರೀದಿಸಿ, ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಗಳಲ್ಲಿ ಕನಿಷ್ಠ ಒಂದು ಶೇಕಡ ಮತಗಳನ್ನು ಪಡೆದಿರುವ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಕಳುಹಿಸಬಹುದಾಗಿದೆ.

Similar News