ಎಸ್‌ಬಿಐ ಗೆ 95 ಕೋ.ರೂ.ವಂಚನೆ: ಈ.ಡಿ.ಯಿಂದ ಕೋಲ್ಕತಾ ನಿವಾಸಿಯ ಬಂಧನ

Update: 2023-04-01 15:58 GMT

ಹೊಸದಿಲ್ಲಿ,ಎ.1: ಎಸ್‌ಬಿಐ ಗೆ 95 ಕೋ.ರೂ.ಗಳನ್ನು ವಂಚಿಸಿದ ಆರೋಪದಲ್ಲಿ ಕೋಲ್ಕತಾದ ಉದ್ಯಮಿಯೋರ್ವನನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾನೂನಿನಡಿ ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ (ಈ.ಡಿ)ವು ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಆರೋಪಿ ಕೌಶಿಕ್ ಕುಮಾರ ನಾಥ್ ನನ್ನು ಮಾ.30ರಂದು ಬಂಧಿಸಲಾಗಿದ್ದು,ಕೋಲ್ಕತಾದ ವಿಶೇಷ ಪಿಎಂಎಲ್ಎ ನ್ಯಾಯಾಲಯವು ಆತನನ್ನು ಎ.10ರವರೆಗೆ ಈ.ಡಿ.ವಶಕ್ಕೊಪ್ಪಿಸಿದೆ.

ನಾಥ್ ನಕಲಿ ದಾಖಲೆಗಳನ್ನು ಸಲ್ಲಿಸಿ ಎಸ್‌ಬಿಐ ನಿಂದ ಸಾಲವನ್ನು ಪಡೆದಿದ್ದ ಮತ್ತುಇ ಅನ್ಯ ಉದ್ದೇಶಗಳಿಗಾಗಿ ಹಣವನ್ನು ಬಳಸಿಕೊಂಡಿದ್ದ. ಆರೋಪಿಯು ಎಸ್‌ಬಿಐಗೆ ಸುಮಾರು 95 ಕೋ.ರೂ.ಗಳನ್ನು ವಂಚಿಸಿದ್ದಾನೆ ಎಂದು ಈ.ಡಿ.ತಿಳಿಸಿದೆ.

ನಾಥ್ ವಿರುದ್ಧ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ದಾಖಲಿಸಿದ್ದ ಒಂದು ಪ್ರಕರಣ ಮತ್ತು ಸಿಬಿಐ ದಾಖಲಿಸಿರುವ ಕನಿಷ್ಠ ನಾಲ್ಕು ಎಫ್ಐಆರ್ ಗಳು ಮತ್ತು ದೋಷಾರೋಪ ಪಟ್ಟಿಗಳನ್ನು ಈ.ಡಿ.ಪ್ರಕರಣ ಆಧರಿಸಿದೆ.

ನಾಥ್ ಆಗಾಗ್ಗೆ ತನ್ನ ಗುರುತನ್ನು ಬದಲಿಸುತ್ತಿದ್ದ ಮತ್ತು ಬ್ಯಾಂಕ್ ಗಳನ್ನು ವಂಚಿಸುತ್ತಿದ್ದ. ಇತ್ತೀಚಗೆ ತನ್ನ ವಾಸಸ್ಥಾನವನ್ನು ಮುಂಬೈಗೆ ಬದಲಿಸಿದ್ದ ಆತ ಅಲ್ಲಿ ಇಂತಹ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ತಿಳಿಸಿರುವ ಈ.ಡಿ. ಪ್ರಕರಣದಲ್ಲಿ 3.68 ಕೋ.ರೂ.ಗಳ ಸ್ಥಿರಾಸ್ತಿಗಳನ್ನೂ ಜಫ್ತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ.

Similar News