50 ವರ್ಷದಲ್ಲಿ ಗರಿಷ್ಠ ಮಟ್ಟ ತಲುಪಿದ ಪಾಕ್ ಹಣದುಬ್ಬರ; ಆಹಾರಕ್ಕೆ ಹಾಹಾಕಾರ

Update: 2023-04-02 03:53 GMT

ಇಸ್ಲಾಮಾಬಾದ್: ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಹಣದುಬ್ಬರ ದರ ಶೇಕಡ 35.37 ತಲುಪಿದ್ದು, ಇದು ಐದು ದಶಕದಲ್ಲಿ ದಾಖಲಾದ ಗರಿಷ್ಠ ಪ್ರಮಾಣವಾಗಿದೆ. ನೆರವಿಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಷರತ್ತುಗಳನ್ನು ಪೂರೈಸಲು ಸರ್ಕಾರ ಹೆಣಗಾಡುತ್ತಿದೆ.

ಕಳೆದ ತಿಂಗಳಿಗೆ ಹೋಲಿಸಿದರೆ ಹಣದುಬ್ಬರ ಶೇಕಡ 3.72ರಷ್ಟು ಹೆಚ್ಚಿದೆ ಎನ್ನುವ ಅಂಶ ಸರ್ಕಾರ ಶನಿವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ. ಕಳೆದ ಹಣಕಾಸು ವರ್ಷದ ವಾರ್ಷಿಕ ಸರಾಸರಿ ಹಣದುಬ್ಬರ ಶೇಕಡ 27.26ರಷ್ಟಾಗಿದೆ.

ಆರ್ಥಿಕ ದುರಾಡಳಿತ ಮತ್ತು ರಾಜಕೀಯ ಅಸ್ಥಿರತೆಯಿಂದ ದೇಶದ ಆರ್ಥಿಕತೆ ಜರ್ಜರಿತವಾಗಿದ್ದು, ಜಾಗತಿಕ ಇಂಧನ ಬಿಕ್ಕಟ್ಟು, ದೇಶದ ಮೂರನೇ ಒಂದರಷ್ಟು ಭಾಗವನ್ನು ಮುಳುಗಿಸಿದ ಭೀಕರ ಪ್ರವಾಹ, ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಗಿದೆ.

ಹಾಲಿ ಇರುವ ಸಾಲ ತೀರಿಸಲು ಕೋಟಿಗಟ್ಟಲೆ ಡಾಲರ್ ಬೇಕಿದ್ದು, ವಿದೇಶಿ ವಿನಿಮಯ ದಾಸ್ತಾನು ಸಂಪೂರ್ಣ ಕರಗಿದೆ. ಬಡ ಪಾಕಿಸ್ತಾನಿಗಳು ಆರ್ಥಿಕ ಬಿಕ್ಕಟ್ಟಿನಿಂದ ತೀವ್ರ ಆತಂಕಿತರಾಗಿದ್ದಾರೆ. ರಮ್ಜಾನ್ ಸಂದರ್ಭದಲ್ಲಿ ನಡೆಯುತ್ತಿರುವ ಆಹಾರ ವಿತರಣಾ ಕೇಂದ್ರಗಳಲ್ಲಿ ಸಂಭವಿಸಿದ ಕಾಲ್ತುಳಿತಗಳಿಂದ ಕಳೆದ ಹತ್ತು ದಿನಗಳಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ.

"ಹಣದುಬ್ಬರ ಏರುತ್ತಿರುವುದು ನೋಡಿದರೆ ಭೀಕರ ಕ್ಷಾಮದ ಪರಿಸ್ಥಿತಿ ಎದುರಾಗುವ ಭೀತಿ ಇದೆ" ಎಂದು ಕರಾಚಿ ಮೂಲದ ವಿಶ್ಲೇಷಕ ಶಹೀದಾ ವಿಝಾರತ್ ಅಭಿಪ್ರಾಯಪಟ್ಟಿದ್ದಾರೆ. ಕರಾಚಿಯ ಫ್ಯಾಕ್ಟರಿಯೊಂದರಲ್ಲಿ ರಮ್ಜಾನ್ ಕಿಟ್‌ಗಳನ್ನು ವಿತರಿಸುತ್ತಿದ್ದ ವೇಳೆ ಶುಕ್ರವಾರ ಸಂಭವಿಸಿದ ಕಾಲ್ತುಳಿತದಲ್ಲಿ 12 ಮಂದಿ ಸಾವಿಗೀಡಾಗಿದ್ದರು.

Similar News