ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಸಲೀಂ ದುರಾನಿ ನಿಧನ

Update: 2023-04-02 05:41 GMT

ಹೊಸದಿಲ್ಲಿ: 1960 ರ ದಶಕದ ಭಾರತದ ಪ್ರಸಿದ್ದ  ಕ್ರಿಕೆಟಿಗ ಸಲೀಂ ದುರಾನಿ(Salim Durani ) ರವಿವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ದುರಾನಿ ಅವರು ತಮ್ಮ ಕಿರಿಯ ಸಹೋದರ ಜಹಾಂಗೀರ್ ದುರಾನಿಯೊಂದಿಗೆ ಗುಜರಾತ್‌ನ ಜಾಮ್‌ನಗರದಲ್ಲಿ ವಾಸಿಸುತ್ತಿದ್ದರು.

ಈ ವರ್ಷದ ಜನವರಿಯಲ್ಲಿ ಕೆಳಗೆ ಬಿದ್ದು  ತೊಡೆಯ ಮೂಳೆ ಮುರಿದ ನಂತರ ದುರಾನಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಕಾಬೂಲ್ ಮೂಲದ ದುರಾನಿ ಅವರು ಆಲ್ ರೌಂಡ್  ಪ್ರದರ್ಶನದಿಂದ ಮಿಂಚಿದ್ದರು.  ಬ್ಯಾಟಿಂಗ್ ನ ಜೊತೆಗೆ ಎಡಗೈ  ಬೌಲರ್ ಕೂಡ ಆಗಿದ್ದರು.  29 ಟೆಸ್ಟ್‌ ಪಂದ್ಯಗಳನ್ನು ಆಡಿದ್ದ ಅವರು 1961-62 ರಲ್ಲಿ ಐತಿಹಾಸಿಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು 2-0 ಅಂತರದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಲ್ಕತ್ತಾ ಮತ್ತು ಮದ್ರಾಸ್‌ನಲ್ಲಿ ಎಂಟು ಹಾಗೂ  10 ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿಗೆ ನೆರವಾಗಿದ್ದರು.

ತಮ್ಮ ಉತ್ತಮ ಡ್ರೆಸ್ಸಿಂಗ್ ಸ್ಟೈಲ್ ಗೆ  ಹೆಸರುವಾಸಿಯಾದ ದುರಾನಿ ಅವರು ತಮ್ಮ ದೇಶಕ್ಕಾಗಿ ಆಡಿದ 50 ಇನಿಂಗ್ಸ್‌ಗಳಲ್ಲಿ ಏಳು ಅರ್ಧಶತಕಗಳನ್ನು ಹಾಗೂ ಕೇವಲ 1 ಶತಕ ಗಳಿಸಿದ್ದರು, ಒಟ್ಟು  1,202 ರನ್ ಗಳಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ವಿಜಯದ ಒಂದು ದಶಕದ ನಂತರ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆಲ್ಲಲು ಮತ್ತೊಮ್ಮೆ  ಪ್ರಮುಖ ಪಾತ್ರ ವಹಿಸಿದ್ದರು.  ಕ್ಲೈವ್ ಲಾಯ್ಡ್ ಹಾಗೂ ಸರ್ ಗಾರ್ಫೀಲ್ಡ್ ಸೋಬರ್ಸ್ ಇಬ್ಬರನ್ನೂ ಔಟ್ ಮಾಡಿದ್ದರು.

1973 ರಲ್ಲಿ 'ಚರಿತ್ರಾ' ಚಿತ್ರದಲ್ಲಿ ಹೆಸರಾಂತ ನಟ ಪ್ರವೀಣ್ ಬಾಬಿ ಜೊತೆ ನಟಿಸಿದ್ದ ಸ್ಟಾರ್ ಕ್ರಿಕೆಟಿಗ ಬಾಲಿವುಡ್‌ನಲ್ಲಿಯೂ ಕಾಲಿಟ್ಟಿದ್ದರು.

Similar News