ಗುಜರಾತ್ ನ್ಯಾಯಾಲಯದಲ್ಲಿ ನಾಳೆ ಜೈಲು ಶಿಕ್ಷೆ ಪ್ರಶ್ನಿಸಲಿರುವ ರಾಹುಲ್ ಗಾಂಧಿ: ವರದಿ

Update: 2023-04-02 05:25 GMT

ಹೊಸದಿಲ್ಲಿ: 2019ರ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಇತ್ತೀಚೆಗೆ ಸಂಸತ್ತಿನಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಮೇಲಿನ  ಜೈಲು ಶಿಕ್ಷೆಯನ್ನು ನಾಳೆ ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು  ತಮ್ಮ ಮನವಿಯಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಶಿಕ್ಷೆ ವಿಧಿಸಿದ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ಸೆಷನ್ಸ್ ನ್ಯಾಯಾಲಯವನ್ನು ಕೋರಿದ್ದಾರೆ. ಪ್ರಕರಣ ಇತ್ಯರ್ಥವಾಗುವವರೆಗೆ ಶಿಕ್ಷೆಗೆ ಮಧ್ಯಂತರ ತಡೆ ನೀಡುವಂತೆಯೂ ಅವರು ಕೋರಿದ್ದಾರೆ.

ಸೂರತ್ ನ್ಯಾಯಾಲಯವು ನಾಳೆ (ಎಪ್ರಿಲ್ 3) ಅವರ ಮನವಿಯನ್ನು ಆಲಿಸಲಿದೆ ಎಂದು ಮೂಲಗಳು 'ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ತಿಳಿಸಿವೆ.

ಮಾರ್ಚ್ 23 ರಂದು ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಚ್. ಎಚ್ .ವರ್ಮಾ ಅವರು 2019 ರಲ್ಲಿ ಮೋದಿ ಉಪನಾಮದ ಕುರಿತು ನೀಡಿದ ಹೇಳಿಕೆಗೆ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿದ್ದರು. ನ್ಯಾಯಾಲಯವು  ಕಾಂಗ್ರೆಸ್ ನಾಯಕನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನ್ಯಾಯಾಲಯವು 15,000 ರೂಪಾಯಿಗಳ ಶ್ಯೂರಿಟಿಯ ಮೇಲೆ ಅವರ ಜಾಮೀನನ್ನು ಅನುಮೋದಿಸಿತು ಹಾಗೂ  ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲು ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಿತ್ತು.

ಆದರೆ ಲೋಕಸಭೆಯ ಸಚಿವಾಲಯವು ತ್ವರಿತವಾಗಿ ರಾಹುಲ್ ರನ್ನು ಅಮಾನತುಗೊಳಿಸಿತ್ತು. ‘ಬುಲೆಟ್ ಟ್ರೈನ್’ ವೇಗದಲ್ಲಿ ರಾಹುಲ್ ಅವರ ವಿರುದ್ಧ ಕ್ರಮ ಕೈಗೊಂಡಿರುವುದನ್ನು  ಪ್ರತಿಪಕ್ಷ ನಾಯಕರು ಪ್ರಶ್ನಿಸಿದ್ದರು.

Similar News