ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿಯ ಹತ್ಯೆ ಆರೋಪಿಯ ಎನ್‌ಕೌಂಟರ್‌

Update: 2023-04-02 06:11 GMT

ಲಕ್ನೊ: 2020ರಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ಕ್ರಿಕೆಟಿಗ ಸುರೇಶ್ ರೈನಾರ (Suresh Raina) ಸಂಬಂಧಿಯ ಹತ್ಯೆಯ ಆರೋಪಿಯಾಗಿದ್ದ ರಾಜಸ್ಥಾನ ಮೂಲದ ಕ್ರಿಮಿನಲ್ ಒಬ್ಬನನ್ನು ಪೊಲೀಸರು ಉತ್ತರ ಪ್ರದೇಶದ ಮುಝಫ್ಫರ್‌ನಗರ ಜಿಲ್ಲೆಯ ಶಹಾಪುರ ಗ್ರಾಮದಲ್ಲಿ ಶನಿವಾರ ಎನ್‌ಕೌಂಟರ್ ಮಾಡಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ರಶೀದ್ ಎ‌.ಕೆ.ಎ. ಸಿಪಾಹಿಯಾ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಹತ್ತಾರು ಕ್ತಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಆತನನ್ನು ಹುಡುಕಿಕೊಟ್ಟವರಿಗೆ ರೂ. 50,000 ಬಹುಮಾನ ಘೋಷಿಸಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಬುಧಾನಾ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ವಿನಯ್ ಕುಮಾರ್ ಗೌತಮ್, "ಮೊರಾದಾಬಾದ್‌ನಲ್ಲಿ ಅಡಗಿಕೊಂಡಿದ್ದ ರಶೀದ್, ಅಪರಾಧ ಕೃತ್ಯವೆಸಗಲು ಮುಝಫ್ಫರ್‌ನಗರಕ್ಕೆ ಬಂದಿದ್ದ. ಆತನನ್ನು ಮಧ್ಯದಲ್ಲೇ ತಡೆದಾಗ, ಆತ ಪೊಲೀಸರ ಮೇಲೆ ಗುಂಡು ಹಾರಿಸಿದ. ಪೊಲೀಸರ ಪ್ರತಿ ದಾಳಿಯಲ್ಲಿ ಆತ ಮೃತಪಟ್ಟ. ಗುಂಡಿನ ಚಕಮಕಿಯಲ್ಲಿ ಶಹಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಬಬ್ಲು ಕುಮಾರ್‌ಗೆ ಗುಂಡೇಟು ತಗುಲಿದ್ದು, ರಶೀದ್‌ನ ಸಹಚರನೊಬ್ಬ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ" ಎಂದು ತಿಳಿಸಿದ್ದಾರೆ.

ಮುಝಫ್ಫರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್, "ಆತನ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ನಾವೀಗ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಆಗಸ್ಟ್ 2020ರಲ್ಲಿ ಸುರೇಶ್ ರೈನಾ ಅವರ ಚಿಕ್ಕಪ್ಪ ಅಶೋಕ್ ಕುಮಾರ್, ಅವರ ಪುತ್ರ ಕೌಶಲ್ ಕುಮಾರ್, ಪತ್ನಿ ಆಶಾ ರಾಣಿ ಅವರ ಮೇಲೆ ಉತ್ತರ ಪ್ರದೇಶದ ಕುಖ್ಯಾತ ಬವಾರಿಯಾ ಗುಂಪಿನ ಛಾ ಮಾರ್ ಗುಂಪು ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯಲ್ಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಅಶೋಕ್ ಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ಅವರ ಪತ್ನಿ ಹಾಗೂ ಪುತ್ರ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ದರೋಡೆಕೋರರ ಗುಂಪು ಅವರ ಮನೆಗೆ ನುಗ್ಗಿ, ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ, ಹಣ ಹಾಗೂ ಬೆಲೆ ಬಾಳುವ ವಸ್ತುಗಳೊಂದಿಗೆ ಪರಾರಿಯಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

Similar News