ಭಾರತದ ಬಹುತೇಕ ಭಾಗಗಳಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣ ಮಾರುತ ಸಾಧ್ಯತೆ

Update: 2023-04-02 10:29 GMT

ಹೊಸದಿಲ್ಲಿ: ಭಾರತದ ಬಹುತೇಕ ಭಾಗಗಳಲ್ಲಿ ಎಪ್ರಿಲ್‌ನಿಂದ ಜೂನ್ ತಿಂಗಳ ನಡುವೆ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣ ಮಾರುತಗಳು (heatwaves) ಬೀಸುವ ಸಾಧ್ಯತೆ ಇದೆ ಎಂದು ಶನಿವಾರ ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಈಶಾನ್ಯ ಹಾಗೂ ನೈಋತ್ಯ ಭಾರತದ ಕೆಲವು ಪ್ರದೇಶಗಳು ಹಾಗೂ ದೂರ ತೀರದಲ್ಲಿರುವ ದ್ವೀಪ ಭಾರತ ಮಾತ್ರ ಉಷ್ಣ ಮಾರುತದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ ಎಂದು  scroll.in ವರದಿ ಮಾಡಿದೆ.

ಬಯಲು ಪ್ರದೇಶಗಳಲ್ಲಿ ಉಷ್ಣ ಮಾರುತದ ಉಷ್ಣಾಂಶವು ಗರಿಷ್ಠ 40 ಡಿಗ್ರಿ ಸೆಲ್ಷಿಯಸ್‌ಗೆ ತಲುಪಲಿದ್ದು, ಇದು ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆಲ್ಷಿಯಸ್ ಅಧಿಕವಾಗಿರಲಿದೆ. ಎಪ್ರಿಲ್ ತಿಂಗಳಿನಲ್ಲಿಯೇ ಬಿಹಾರ, ಝಾರ್ಖಂಡ್, ಪೂರ್ವ ಉತ್ತರ ಪ್ರದೇಶ, ಒಡಿಶಾ, ಛತ್ತೀಸ್‌ಗಢ, ಮಹರಾಷ್ಟ್ರದ ಪಶ್ಚಿಮ ಭಾಗಗಳು, ಪಂಜಾಬ್ ಮತ್ತು ಹರ್ಯಾಣ, ಗುಜರಾತ್‌ನಂಥ ಕೆಲವು ರಾಜ್ಯಗಳು ಹಾಗೂ ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳು ಉಷ್ಣ ಮಾರುತದಿಂದ ತತ್ತರಿಸಲಿವೆ ಎಂದು ತನ್ನ ಋತುಮಾನ ಮುನ್ಸೂಚನೆಯಲ್ಲಿ ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಎರಡು ದಶಗಳಿಂದ ಭಾರತವು ಉಷ್ಣ ಮಾರುತಗಳ ಸ್ಥಿರ ಏರಿಕೆಗೆ ಸಾಕ್ಷಿಯಾಗಿದೆ. 2000-2004 ಹಾಗೂ 2017-2021ರ ನಡುವೆ ಭಾರತದಲ್ಲಿ ಬಿಸಿಗಾಳಿಯಿಂದ ಮೃತಪಟ್ಟವರ ಸಂಖ್ಯೆ ಶೇ. 55ರಷ್ಟು ಏರಿಕೆಯಾಗಿದೆ ಎಂಬ ಅಧ್ಯಯನ ವರದಿಯನ್ನು ವೈದ್ಯಕೀಯ ವಾರ್ತಾಪತ್ರ The Lancet ಪ್ರಕಟಿಸಿತ್ತು.

2021ರ ಅವಧಿಯಲ್ಲಿ ಭಾರತದಲ್ಲಿ ಬಿಸಿ ಗಾಳಿಯಿಂದ 167.2 ಶತಕೋಟಿ ಮಾನವ ಗಂಟೆಗಳ ಸಾಮರ್ಥ್ಯ ನಷ್ಟವಾಗಿತ್ತು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದರಿಂದ ರಾಷ್ಟ್ರೀಯ ಜಿಡಿಪಿಯ ಶೇ. 5.4ಕ್ಕೆ ಸಮನಷ್ಟು ಆದಾಯ ನಷ್ಟ ಉಂಟಾಗಿತ್ತು ಎಂದೂ ವರದಿಯಲ್ಲಿ ಹೇಳಲಾಗಿತ್ತು.

ಕಳೆದ ಡಿಸೆಂಬರ್‌ನಲ್ಲಿ ಪ್ರಕಟವಾಗಿದ್ದ ಮತ್ತೊಂದು ವರದಿಯಲ್ಲಿ, 2030ರಿಂದ ಉಷ್ಣ ಮಾರುತದ ಕಾರಣಕ್ಕೆ 16 ಕೋಟಿ ಭಾರತೀಯರು ಪ್ರತಿಕೂಲ ಪರಿಣಾಮ ಎದುರಿಸಲಿದ್ದು, ಬಿಸಿ ಸಂಬಂಧಿತ ಉತ್ಪಾದನಾ ಇಳಿಕೆಯಿಂದ ಅಂದಾಜು 3.4 ಕೋಟಿ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ  ಎಂದು ವಿಶ್ವಸಂಸ್ಥೆ ಅಂದಾಜಿಸಿತ್ತು.

ಇದನ್ನೂ ಓದಿ: ವಾಹನ ತಡೆದು ದಾಳಿ ಪ್ರಕರಣ: ಅಮಾನುಷ ದೌರ್ಜನ್ಯದ ವೀಡಿಯೋ ಹರಿಯಬಿಟ್ಟಿದ್ದ ಪುನೀತ್ ಕೆರೆಹಳ್ಳಿ; ವ್ಯಾಪಕ ಆಕ್ರೋಶ

Similar News