ಕಾರೈಕಲ್ ಬಂದರನ್ನು 1,485 ಕೋಟಿ ರೂ.ಗಳಿಗೆ ಸ್ವಾಧೀನ ಪಡಿಸಿಕೊಂಡ ಅದಾನಿ ಪೋರ್ಟ್ಸ್

Update: 2023-04-02 13:35 GMT

ಹೊಸದಿಲ್ಲಿ: ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಾಧಿಕರಣ (ಎನ್ಸಿಎಲ್ಟಿ)ದ ಅನುಮತಿಯ ಬಳಿಕ ಕಾರೈಕಲ್ ಪೋರ್ಟ್ (Karaikal Port) ಪ್ರೈ.ಲಿ. (ಕೆಪಿಪಿಎಲ್)ನ ಸ್ವಾಧೀನ ಪ್ರಕ್ರಿಯೆಯನ್ನು ತಾನು ಪೂರ್ಣಗೊಳಿಸಿರುವುದಾಗಿ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಇಕನಾಮಿಕ್ ರೆನ್ (Adani Ports) ಶನಿವಾರ ಪ್ರಕಟಿಸಿದೆ. ಈ ಸ್ವಾಧೀನಕ್ಕಾಗಿ ಅದು 1,485 ಕೋಟಿ ರೂ.ಗಳನ್ನು ಪಾವತಿಸಿದೆ. ಕಾರ್ಪೊರೇಟ್ ದಿವಾಳಿ ನಿರ್ಣಯ ಪ್ರಕ್ರಿಯೆಯಡಿ ಅದಾನಿ ಪೋರ್ಟ್ಸ್ ಕೆಪಿಪಿಲ್ ನ ಸ್ವಾಧೀನಕ್ಕೆ ಯಶಸ್ವಿ ಅರ್ಜಿದಾರನಾಗಿತ್ತು.

ಪುದುಚೇರಿಯಲ್ಲಿನ ಸರ್ವಋತು ಆಳ ಸಮುದ್ರ ಬಂದರು ಆಗಿರುವ ಕಾರೈಕಲ್ ಪೋರ್ಟ್ ಐದು ಕಾರ್ಯಾಚರಣೆ ಬರ್ತ್ ಗಳು, ಮೂರು ರೈಲ್ವೆ ಸ್ಲೈಡಿಂಗ್ಗಳು, 600 ಹೆಕ್ಟೇರ್ಗೂ ಅಧಿಕ ಒಟ್ಟು ಭೂಪ್ರದೇಶ ಮತ್ತು 21.5 ಮಿಲಿಯನ್ ಮೆಟ್ರಿಕ್ ಟನ್ ಕಾರ್ಗೊ ನಿರ್ವಹಣೆಯ ಸೌಲಭ್ಯಗಳನ್ನು ಹೊಂದಿದೆ.

ಕೆಪಿಪಿಲ್ ಸ್ವಾಧೀನದೊಂದಿಗೆ ಅದಾನಿ ಪೋರ್ಟ್ಸ್ ಈಗ ಭಾರತದಲ್ಲಿ 14 ಬಂದರುಗಳನ್ನು ನಿರ್ವಹಿಸುತ್ತಿದೆ. ಗ್ರಾಹಕರಿಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಮೂಲಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಅದಾನಿ ಪೋರ್ಟ್ಸ್ ಇನ್ನೂ 850 ಕೋಟಿ ರೂ.ಗಳನ್ನು ವ್ಯಯಿಸಲಿದೆ ಎಂದು ಕಂಪನಿಯ ಸಿಇಒ ಕರಣ ಅದಾನಿ ತಿಳಿಸಿದರು.

ಮುಂದಿನ ಐದು ವರ್ಷಗಳಲ್ಲಿ ಬಂದರಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಮತ್ತು ಅದನ್ನು ವಿವಿಧೋದ್ದೇಶ ಬಂದರನ್ನಾಗಿಸಲು ಕಂಟೇನರ್ ಟರ್ಮಿನಲ್ ಅನ್ನೂ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಕಾರೈಕಲ್ ನಲ್ಲಿ 2009ರಲ್ಲಿ ಕೆಪಿಪಿಲ್ ಅಸ್ತಿತ್ವಕ್ಕೆ ಬಂದಿತ್ತು. ಚೆನ್ನೈ ಮತ್ತು ತೂತ್ತುಕುಡಿ ನಡುವೆ ಏಕೈಕ ಪ್ರಮುಖ ಬಂದರು ಆಗಿರುವ ಅದು ಕೈಗಾರಿಕೆಗಳು ಹೆಚ್ಚಿರುವ ಮಧ್ಯ ತಮಿಳುನಾಡಿನ ಒಳನಾಡಿಗೆ ಹೆಚ್ಚು ಅನುಕೂಲಕರವಾಗಿದೆ.

ಇದನ್ನೂ ಓದಿ: ಕಳೆದ ನಾಲ್ಕು ವರ್ಷಗಳಲ್ಲಿ ಈಡಿ ದಾಖಲಿಸಿಕೊಂಡಿರುವ ಪ್ರಕರಣಗಳ ಸಂಖ್ಯೆ ಶೇ. 500ರಷ್ಟು ಏರಿಕೆ

Similar News