×
Ad

ಬಿಹಾರ: ನಳಂದಾದಲ್ಲಿ ಮತ್ತೆ ಭುಗಿಲೆದ್ದ ಹಿಂಸೆ, ಘರ್ಷಣೆಗೆ ಓರ್ವ ಬಲಿ, ಹಲವರಿಗೆ ಗಾಯ

ಸಸಾರಾಮ್ ನಲ್ಲಿ ಬಾಂಬ್ ಸ್ಫೋಟ, ಆರು ಮಂದಿಗೆ ಗಾಯ

Update: 2023-04-02 20:48 IST

ಹೊಸದಿಲ್ಲಿ, ಎ.2: ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಕೋಮು ಸಂಘರ್ಷಕ್ಕೆ ಸಾಕ್ಷಿಯಾದ ಬಿಹಾರದಲ್ಲಿ  ಶನಿವಾರ ತಡರಾತ್ರಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು,  ಘರ್ಷಣೆಯಲ್ಲಿ ಒಬ್ಬಾತ ಸಾವನ್ನಪ್ಪಿದ್ದಾನೆ ಹಾಗೂ ಹಲವಾರು ಗಾಯಗೊಂಡಿದ್ದಾರೆ.

ನಳಂದಾ ಜಿಲ್ಲೆಯ ಬಿಹಾರಶರೀಫ್ನಲ್ಲಿ ಶನಿವಾರ ಸಂಜೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಗಳಲ್ಲಿ ಓರ್ವ ಮೃತಪಟ್ಟಿದ್ದು, ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಸಾರಾಮ್ ಜಿಲ್ಲೆಯನಲ್ಲಿ  ಬಾಂಬ್ ಸ್ಪೋಟದ ಘಟನೆಯೊಂದರಲ್ಲಿ ಆರು ಮಂದಿಗೆ ಗಾಯಗಳಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಿಹಾರ ಶರೀಫ್ ಹಾಗೂ ರೋಹ್ಟಾಸ್ ನಗರಗಳಲ್ಲಿ ಗುರುವಾರ ಸಂಜೆ  ನಡೆದ ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮೊದಲ ಬಾರಿಗೆ ಘರ್ಷಣೆಯ ಕಿಡಿ ಹೊತ್ತಿಕೊಂಡಿತ್ತು. ಹಿಂಸಾಚಾರವು ಶುಕ್ರವಾರವೂ ಮುಂದುವರಿದಿದ್ದು, ಹಲವಾರು ವಾಹನಗಳು, ಮನೆಗಳು ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಹಾಗೂ ಅನೇಕ ಮಂದಿ ಗಾಯಗೊಂಡಿದ್ದಾರೆ.
 
ಶನಿವಾರ ರಾತ್ರಿ  ಬಿಹಾರ ಶರೀಫ್ನ ಎರಡು ಮೂರು ಕಡೆಗಳಲ್ಲಿ  ಹೊಸತಾಗಿ ಗಲಭೆಗಳು ಭುಗಿಲೆದ್ದಿರುವುದಾಗಿ ಜಿಲ್ಲಾಧಿಕಾರಿ ಶುಭಂಕರ್ ತಿಳಿಸಿದ್ದಾರೆ. ಘರ್ಷಣೆಗೆ ಸಂಬಂಧಿಸಿ 80ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಎಂಟು  ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಮತ್ತು ಶನಿವಾರ ರಾತ್ರಿ  ಪೊಲೀಸರು ನಡೆಸಿದ ದಾಳಿಗಳಲ್ಲಿ 50ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆಯೆಂದು ಮಿಶ್ರಾಹೇಳಿದ್ದಾರೆ.

‘‘ರೋಹ್ಟಾಸ್ ನಗರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನೆಯ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ.ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ’’ ಎಂದು ಸಸಾರಾಮ್ ಜಿಲ್ಲಾಧಿಕಾರಿ ಧರ್ಮೇಂದ್ರ ಕುಮಾರ್ ತಿಳಿಸಿದ್ದಾರೆ.

‘‘ರೋಹ್ಟಾಸ್ನ ಸಂತೆಮಾರುಕಟ್ಟೆ ಪ್ರದೇಶದಲ್ಲಿ ಈ ಸ್ಫೋಟ ನಡೆದಿದ್ದು,  ಸ್ಥಳದಿಂದ ಸ್ಕೂಟರ್ ಒಂದನ್ನು  ವಶಪಡಿಸಿಕೊಳ್ಳಲಾಗಿದೆ. ಆದರೆ ಇದು  ಕೋಮುಗಲಭೆಯ ಪ್ರಕರಣವೆಂಬಂತೆ ಮೇಲ್ನೋಟಕ್ಕೆ ಗೋಚರಿಸುತ್ತಿಲ್ಲ ’’ ಎಂದು ಪೊಲೀಸರು ತಿಳಿಸಿದ್ದಾರೆ.
ನಳಂದಾಜಿಲ್ಲೆಯಲ್ಲಿಯೂ  ಪರಿಸ್ಥಿತಿ ಶಾಂತಿಯೆಡೆಗೆ ಮರಳಿದ್ದು, ನಿಯಂತ್ರಣದಲ್ಲಿದೆಯೆಂದು ನಳಂದಾ ಜಿಲ್ಲಾಧಿಕಾರಿ ಶಶಾಂಕ್ ಶುಭಂಕರ್ ತಿಳಿಸಿದ್ದಾರೆ.

ಬಿಹಾರವಲ್ಲದೆ, ಗುಜರಾತ್, ಪಶ್ಚಿಮಬಂಗಾಳ, ದಿಲ್ಲಿ, ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ಈ ಸಲದ ರಾಮನವಮಿ ಮೆರವಣಿಗೆ ಸಂದರ್ಭ ಕೋಮು ಘರ್ಷಣೆಯ ಘಟನೆಗಳು ವರದಿಯಾಗಿದ್ದವು. ಈ ಮಧ್ಯೆ ಸಸಾರಾಮ್ ಹಾಗೂ ಬಿಹಾರಶರೀಫ್ ನಗರಗಳಲ್ಲಿ ನಾಲ್ವರು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಒಟ್ಟುಗೂಡುವುದನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ.

ಕೋಮುಸೌಹಾರ್ದತೆ ಕದಡುವುದಕ್ಕೆ ಆಸ್ಪದ ನೀಡುವುದಿಲ್ಲ: ನಿತೀಶ್

ರಾಮನವಮಿ  ಉತ್ಸವದ ಸಂದರ್ಭ  ರಾಜ್ಯದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಯಾಗಿರುವುದು ಕಳವಳಕಾರಿಯೆಂದು  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.   ಗಲಭೆಗೆ ಕಾರಣರಾದವರನ್ನು ಶಿಕ್ಷಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

‘‘ಇಂತಹ ಘಟನೆಗಳು ಈ ಪ್ರದೇಶದಲ್ಲಿ ನಡೆದಿರುವುದು ಇದೇ ಮೊದಲ ಸಲವಾಗಿದೆ. ಕೆಲವು ಜನರು ಕಿಡಿಗೇಡಿ ಕೃತ್ಯಗಳಲ್ಲಿ ತೊಡಗಿರುವುದು ಮತ್ತು ರಾಜ್ಯದಲ್ಲಿ ಕೋಮುಸೌಹಾರ್ದಕ್ಕೆ ಅಡ್ಡಿಪಡಿಸಲು  ಯತ್ನಿಸುತ್ತಿರುವುದು ನಮಗೆ ತಿಳಿದಿದೆ. ಅದಕ್ಕೆ ನಾವು ಆಸ್ಪದ ಕೊಡುವುದಿಲ್ಲ’’ ಎಂದು ನಿತೀಶ್ ತಿಳಿಸಿದರು.

ಅಮಿತ್ ಶಾ ಅವರ ಯೋಜಿತ ಬಿಹಾರ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ‘‘ ಅವರು ಯಾಕೆ ಬರುತ್ತಿದ್ದಾರೆಂಬುದು ನನಗೆ ತಿಳಿದಿಲ್ಲ ಮತ್ತು ಅವರು ಬಾರದೆ ಇರಲು ಯಾಕೆ ನಿರ್ಧರಿಸಿದ್ದಾರೆ ಎಂಬುದೇ ನನಗೆ ತಿಳಿದಿಲ್ಲ’’ ಎಂದು ಹೇಳಿದ್ದಾರೆ.

Similar News