ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಈ ಬಾರಿಯ ‘ಮಿಲಾಪ್’
ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಯೋಜಿಸುವ ಮಣಿಪಾಲ ಇಂಟರ್ ನೇಷನಲ್ ಲಿಟರೇಚರ ಆ್ಯಂಡ್ ಆರ್ಟ್ ಪ್ಲಾಟ್‌ಫೋರಂ (ಮಿಲಾಪ್)ನ ನಾಲ್ಕನೇ ಅಧ್ಯಾಯ ಈ ಬಾರಿ ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಕಳೆದ ಮೂರು ವರ್ಷಗಳಿಂದ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಕುರಿತಂತೆ ಮಾಹೆ ಸಂಘಟಿಸುವ ವಾರ್ಷಿಕ ಹಬ್ಬ ಮಿಲಾಪ್ ಈ ಬಾರಿ ಎ.6ರಿಂದ ೮ರವರೆಗೆ ಯಲಹಂಕದಲ್ಲಿರುವ ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಮಿಲಾಪ್‌ನ ಮೊದಲ ಮೂರು ಅಧ್ಯಾಯಗಳು ಮಣಿಪಾಲದಲ್ಲಿ ನಡೆದಿದ್ದವು. ಮಿಲಾಪ್ 2023- ‘ಬೆಂಗಳೂರಿನೊಂದಿಗೆ ಮಾತುಕತೆ: ಅವಕಾಶ, ಛೇದನ, ಪರಿವರ್ತನೆಗಳು ಹಾಗೂ ಕಲ್ಪನೆಗಳು’(ಎಸ್‌ಐಟಿಐ) ವಸ್ತುವಿನೊಂದಿಗೆ ಸಮಾಜದ ಖ್ಯಾತನಾಮ ಶಿಕ್ಷಣ ತಜ್ಞರು, ಕವಿಗಳು, ವಿಮರ್ಶಕರು, ಚಿತ್ರನಿರ್ಮಾಪಕರು ಹಾಗೂ ರಂಗಕರ್ಮಿಗಳು ತಮ್ಮ ಧ್ವನಿ ಹಾಗೂ ಅನಿಸಿಕೆಗಳನ್ನು ಸೇರಿಸಲಿದ್ದಾರೆ.
ನಾಡಿನ ಖ್ಯಾತನಾಮ ಸಾಹಿತ್ಯ ವಿಮರ್ಶಕ, ವಿದ್ವಾಂಸ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಪ್ರೊ.ಗಣೇಶ ಎನ್.ದೇವಿ ಶಿಖರೋಪನ್ಯಾಸ ನೀಡಲಿದ್ದಾರೆ. ಈ ಬಾರಿಯ ಮಿಲಾಪ್‌ನಲ್ಲಿ ಚರ್ಚೆ, ಸಂವಾದ, ಕಾರ್ಯಾಗಾರ, ಖ್ಯಾತ ಚಿತ್ರಗಳ ಪ್ರದರ್ಶನ, ಸ್ಪರ್ಧೆ ಹಾಗೂ ರಂಗ ಪ್ರದರ್ಶನಗಳಿರುತ್ತವೆ.
ಮೂರು ದಿನಗಳ ಕಾಲ ನಡೆಯುವ ಮಾಸ್ಟರ್ ಕ್ಲಾಸ್‌ಗಳಲ್ಲಿ ಪ್ರೊ.ರಾಜೇಂದ್ರ ಚೆನ್ನಿ, ಶರತ್‌ಚಂದ್ರ ಲೇಲೆ, ಜಾನಕಿ ನಾಯರ್ ಒಂದೊಂದು ವಿಷಯಗಳ ಮೇಲೆ ಉಪನ್ಯಾಸ ನೀಡಲಿದ್ದಾರೆ. ಚರ್ಚೆ-ಸಂವಾದಗಳಲ್ಲಿ ಗಿರೀಶ್ ಕಾಸರವಳ್ಳಿ, ಎಚ್.ಎಸ್.ಶಿವಪ್ರಕಾಶ್, ಪೃಥ್ವಿ ಕೊಣನೂರು, ಬಾನು ಮುಷ್ತಾಕ್ ಹಾಗೂ ದೀಪಾ ಬಿ. ಅವರು ಪಾಲ್ಗೊಳ್ಳಲಿದ್ದಾರೆ.
ಪ್ರತಿದಿನ ಸಂಜೆ ವೇಳೆ ವಿವಿಧ ಪ್ರದರ್ಶನಗಳಿರುತ್ತವೆ. ಇದರಲ್ಲಿ ನಲಂದ ಆರ್ಟ್ಸ್ ಸ್ಟುಡಿಯೋ, ನಾಗಾ ಥಿಯೇಟರ್ ಹಾಗೂ ಯಕ್ಷ ದುರ್ಗಾ ಮಹಿಳಾ ಕಲಾ ಬಳಗದಿಂದ ‘ಪದ್ಮಾತಿ ಕಾಳಗ’ ತಾಳಮದ್ದಲೆ ನಡೆಯಲಿದೆ ಎಂದು ಮಾಹೆ ಪ್ರಕಟಣೆ ತಿಳಿಸಿದೆ.