ಕೋವಿಡ್ 19: ದೇಶದಲ್ಲೇ ಅತಿಹೆಚ್ಚು ಪ್ರಕರಣ ಈ ರಾಜ್ಯದಲ್ಲಿ...

Update: 2023-04-03 02:30 GMT

ಹೊಸದಿಲ್ಲಿ: ಕಳೆದ ಒಂದು ವಾರದ ಅವಧಿಯಲ್ಲಿ ನಾಲ್ಕು ಸಾವಿರ ಕೋವಿಡ್-19 ಪ್ರಕರಣಗಳು ಕೇರಳದಲ್ಲಿ ವರದಿಯಾಗಿದ್ದು, ಇದು ದೇಶದಲ್ಲೇ ಅತ್ಯಧಿಕ. ಹಿಂದಿನ ಏಳು ದಿನಗಳ ಅವಧಿಗೆ ಹೋಲಿಸಿದರೆ ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಕೇರಳ, ಗೋವಾ ಮತ್ತು ಉತ್ತರ ರಾಜ್ಯಗಳಾದ ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ಗಣನೀಯವಾಗಿ ಪ್ರಕರಣಗಳು ಹೆಚ್ಚುತ್ತಿವೆ.

ಬಹುತೇಕ ರಾಜ್ಯಗಳಲ್ಲಿ ಕಳೆದ ವಾರದ ಒಟ್ಟು ಪ್ರಕರಣಗಳ ಸಂಖ್ಯೆ ಹಿಂದಿನ ವಾರದ ಪ್ರಕರಣಳಿಗಿಂತ ಮೂರು ಪಟ್ಟು ಅಧಿಕವಾಗಿದೆ. ಹಿಮಾಚಲ ಪ್ರದೇಶ ದೇಶದಲ್ಲಿ ಆರನೇ ಅತ್ಯಧಿಕ ಪ್ರಕರಣಗಳನ್ನು ದಾಖಲಿಸಿದ ರಾಜ್ಯ ಎನಿಸಿಕೊಂಡಿದ್ದು, ಹಿಂದಿನ ವಾರ 409 ಪ್ರಕರಣಗಳು ವರದಿಯಾಗಿದ್ದ ಇಲ್ಲಿ ಈ ವಾರ 1200 ಹೊಸ ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಕೂಡಾ ಪ್ರಕರಣಗಳ ಏರಿಕೆ ದರ ಅಧಿಕವಿದ್ದರೂ, ಪ್ರಕರಣಗಳ ಹೆಚ್ಚಳ ದರ ಹಿಂದಿನ ವಾರಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕೂಡಾ ಕೋವಿಡ್ ಸೋಂಕು ಹೆಚ್ಚುತ್ತಿದೆ. ತೆಲಂಗಾಣದಲ್ಲಿ ಪ್ರಕರಣಗಳು ಇಳಿಮುಖವಾಗಿದ್ದರೆ, ಆಂಧ್ರಪ್ರದೇಶದಲ್ಲಿ ಹೊಸದಾಗಿ ಪ್ರಕರಣಗಳು ಕಂಡುಬರುತ್ತಿವೆ ಎನ್ನುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಕಳೆದ ವಾರ 1333 ಪ್ರಕರಣಗಳು ವರದಿಯಾಗಿದ್ದ ಕೇರಳದಲ್ಲಿ ಈ ಬಾರಿ 4000 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ಕೇರಳ ಅತ್ಯಧಿಕ ಪ್ರಕರಣಗಳು ಹೊಂದಿದ್ದ ರಾಜ್ಯವಾದ ಮಹಾರಾಷ್ಟ್ರವನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ. ಮಹಾರಾಷ್ಟ್ರದಲ್ಲಿ ಏಳು ದಿನಗಳ ಅವಧಿಯಲ್ಲಿ 3323 ಪ್ರಕರಣಗಳು ವರದಿಯಾಗಿದ್ದು, ಹಿಂದಿನ ವಾರಕ್ಕೆ ಹೋಲಿಸಿದರೆ ಇದು ಶೇಕಡ 70ರಷ್ಟು ಅಧಿಕ.

Similar News