'ಹೆಚ್ಚುವರಿ' ರೇಷನ್‌ ಕಾರ್ಡ್‌ ರದ್ದು: ಗುಜರಾತ್ ಸರ್ಕಾರದ ಕ್ರಮದಿಂದ ಆಹಾರ ವಂಚಿತವಾಗುತ್ತಿರುವ ಬುಡಕಟ್ಟು ಕುಟುಂಬಗಳು

Update: 2023-04-03 09:01 GMT

ಹೊಸದಿಲ್ಲಿ: ಗುಜರಾತ್‌ (Gujarat) ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯನ್ವಯ 'ಹೆಚ್ಚುವರಿ' ರೇಷನ್‌ ಕಾರ್ಡ್‌ಗಳನ್ನು (Ration Cards) ರದ್ದುಗೊಳಿಸುವ ಕುರಿತಂತೆ ಗುಜರಾತ್‌ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಯಾವುದೇ ಸಾಮಾಜಿಕ-ಆರ್ಥಿಕ ಸಮೀಕ್ಷೆ ಕೈಗೊಳ್ಳದೆಯೇ ಈ ಕ್ರಮ ಕೈಗೊಂಡಿರುವುದರಿಂದ ಇದು ರಾಜ್ಯದ 80,000 ಕ್ಕೂ ಅಧಿಕ ಬುಡಕಟ್ಟು ಕುಟುಂಬಗಳ ಐದು ಲಕ್ಷಕ್ಕೂ ಹೆಚ್ಚು ಸದಸ್ಯರಿಗೆ ಆಹಾರಕ್ಕಾಗಿ ಇರುವ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಿದೆ ಎಂದು thewire.in ವರದಿ ಮಾಡಿದೆ.

ಆದರೆ ಗುಜರಾತ್‌ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ ಹಾಗೂ ರಾಜ್ಯದ ಹಲವು ಪ್ರದೇಶಗಳಲ್ಲಿನ ಜನರಿಗಿಂತಲೂ ಹೆಚ್ಚು ರೇಷನ್‌ ಕಾರ್ಡ್‌ಗಳಿವೆ ಎಂದು ಹೇಳಿಕೊಂಡಿದೆ. ಇದೇ ಕಾರಣ ನೀಡಿ ಅದು 11 ಜಿಲ್ಲೆಗಳ 83,556 ಕುಟುಂಬಗಳ ರೇಷನ್‌  ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಆದರೆ ಈ ಕ್ರಮಕೈಗೊಂಡ ಪ್ರದೇಶಗಳಲ್ಲಿ ಹೆಚ್ಚಾಗಿ ಬುಡಕಟ್ಟು ಕುಟುಂಬಗಳು ವಾಸಿಸುತ್ತಿವೆ ಎಂದು ಕಾಂಗ್ರೆಸ್‌ ಹೇಳಿದೆ.

ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಹೆಚ್ಚಿನ ಜನರು ತುಂಬಾ ಬಡವರಾಗಿದ್ದಾರೆ. ಈ ರೀತಿ ಯಾವುದೇ ಸಮೀಕ್ಷೆ ಕೈಗೊಳ್ಳದೆ ಕ್ರಮಕೈಗೊಂಡಿರುವುದು ಸರಿಯಲ್ಲ. ಹಿರಿಯ ನಾಗರಿಕರ, ವಿಕಲ ಚೇತನರ, ಮಹಿಳೆಯರ ಮತ್ತು ವಿಧವೆಯರ ರೇಷನ್‌ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ವನ್ಸದಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅನಂತ್‌ ಪಟೇಲ್‌ ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ರ್ಯಾಲಿ ನಡೆಸಲಾಗುವುದು ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು, ಬೇಡಿಕೆಗೆ ಸ್ಪಂದಿಸದೇ ಇದ್ದರೆ ರಾಜ್ಯಾದ್ಯಂತ  ಹೋರಾಟ ನಡೆಸಲಾಗುವುದು ಎಂದು ಶಾಸಕ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ವ್ಯಾಸಂಗ ಮಾಡಿದ ಬಗ್ಗೆ ಕಾಲೇಜಿಗೇಕೆ ಹೆಮ್ಮೆಯಿಲ್ಲ: ಉದ್ಧವ್ ಠಾಕ್ರೆ ಪ್ರಶ್ನೆ

Similar News