ದೇಶಾದ್ಯಂತ ಗಲಭೆಗಳನ್ನು ಯೋಜಿಸಲು, ಪ್ರಚೋದಿಸಲು ಬಿಜೆಪಿ ಒಂದು ವಿಭಾಗ ಸ್ಥಾಪಿಸಿದೆ: ಸಂಜಯ್ ರಾವುತ್

Update: 2023-04-03 08:38 GMT

ಮುಂಬೈ: ಬಿಜೆಪಿ  ದೇಶದಾದ್ಯಂತ ಗಲಭೆಗಳನ್ನು ಯೋಜಿಸುತ್ತಿದೆ ಹಾಗೂ  ಪ್ರಾಯೋಜಿಸುತ್ತಿದೆ. ಭಾರತದಾದ್ಯಂತ ಅಂತಹ ಗಲಭೆಗಳನ್ನು ಪ್ರಚೋದಿಸಲು ಒಂದು ವಿಭಾಗವನ್ನು ಕೂಡ  ಸ್ಥಾಪಿಸಿದೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ (Sanjay Raut)ಸೋಮವಾರ ಆರೋಪಿಸಿದ್ದಾರೆ.

ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾವುತ್, 2024 ರ ಚುನಾವಣೆ ನಡೆಯುವವರೆಗೆ ದೇಶದಲ್ಲಿ ಗಲಭೆ ಸೃಷ್ಟಿಸಲು ಹಾಗೂ  ಗಲಭೆಯ ನೆಪದಲ್ಲಿ ಚುನಾವಣೆಯನ್ನು ಮುಂದೂಡಲು ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.

"ದೇಶದಲ್ಲಿ ನಡೆಯುತ್ತಿರುವ ಗಲಭೆಗಳ ಹಿಂದೆ ಯಾರಿದ್ದಾರೆ, ಗಲಭೆಕೋರರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ.  ಪಶ್ಚಿಮಬಂಗಾಳದ ಹೌರಾದಲ್ಲಿ ಗಲಭೆ ಸೃಷ್ಟಿಸುತ್ತಿರುವವರು ಯಾರು? ಮಹಾರಾಷ್ಟ್ರದಲ್ಲಿ ಗಲಭೆ ಸೃಷ್ಟಿಸುತ್ತಿರುವವರು ಯಾರು? ಭಾರತೀಯ ಜನತಾ ಪಾರ್ಟಿ ಹೊಸ ವಿಭಾಗವನ್ನು ರಚಿಸಿದೆ. ಈ ವಿಭಾಗದ ಮೂಲಕವೇ ಗಲಭೆಗಳನ್ನು ಸೃಷ್ಟಿಸಲಾಯಿತು. 2024ರ ಚುನಾವಣೆಗೂ ಮುನ್ನ ದೇಶದಲ್ಲಿ ಗಲಭೆಗಳನ್ನು ಹುಟ್ಟುಹಾಕಿ ನಂತರ ಚುನಾವಣೆ ಎದುರಿಸುವುದು ಅಥವಾ ಚುನಾವಣೆಯನ್ನು ಮುಂದೂಡುವುದು ಅವರ ನೀತಿಯಂತೆ ಕಾಣುತ್ತಿದೆ'' ಎಂದು ಹೇಳಿದರು.

*ನೂತನ ಸಂಸತ್ ಭವನದಲ್ಲಿ ಪ್ರಧಾನಿ ಪದವಿ ಪ್ರದರ್ಶಿಸಬೇಕು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹೊಸದಾಗಿ ನಿರ್ಮಿಸಲಾಗುತ್ತಿರುವ ಸಂಸತ್ ಭವನದಲ್ಲಿ ಪ್ರಧಾನಿ ಅವರ ಪದವಿಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.

 “ಕೆಲವು ಜನರು ಗೌರವಾನ್ವಿತ  ಪ್ರಧಾನಿ ಪದವಿಯನ್ನು ನಕಲಿ ಎಂದು ಕರೆಯುತ್ತಾರೆ. ಇಡೀ ಪೊಲಿಟಿಕಲ್ ಸೈನ್ಸ್‌ನಲ್ಲಿನ ಪದವಿ ಐತಿಹಾಸಿಕ ಹಾಗೂ  ಕ್ರಾಂತಿಕಾರಿ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ! ಆದ್ದರಿಂದ ನಮ್ಮ ಹೊಸ ಸಂಸತ್ತಿನ ಕಟ್ಟಡದ ಮಹಾದ್ವಾರದಲ್ಲಿ ಅದನ್ನು ಪ್ರದರ್ಶಿಸಬೇಕು.  ಆಗ ಮಾತ್ರ ಜನರು ಅದರ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುವುದನ್ನು ನಿಲ್ಲಿಸುತ್ತಾರೆ ”ಎಂದು ರಾವುತ್ ಸೋಮವಾರ ಟ್ವೀಟ್ ಮಾಡಿದ್ದಾರೆ.

Similar News