ನೂತನ ಸಂಸತ್ ಭವನದೆದುರು ಪ್ರಧಾನಿಯ ಪದವಿ ಪ್ರಮಾಣಪತ್ರ ಪ್ರದರ್ಶಿಸಿ: ಸಂಜಯ್ ರಾವುತ್

Update: 2023-04-03 08:41 GMT

ಮುಂಬೈ: ನೂತನ ಸಂಸತ್ ಭವನದ ಮುಖ್ಯ ಪ್ರವೇಶ ದ್ವಾರದೆದುರು ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪತ್ರವನ್ನು ಪ್ರದರ್ಶಿಸಬೇಕು ಎಂದು ಸೋಮವಾರ ಆಗ್ರಹಿಸುವ ಮೂಲಕ ಶಿವಸೇನೆ (ಉದ್ಧವ್ ಠಾಕ್ರೆ) ಬಣವು ಸೂಕ್ಷ್ಮ ವಿಷಯವಾಗಿ ಬದಲಾಗಿರುವ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವ್ಯಾಸಂಗದ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ ಎಂದು business-standard.com ವರದಿ ಮಾಡಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವ ಸೇನೆ (ಉದ್ಧವ್ ಠಾಕ್ರೆ) ಬಣದ ಸಂಸದ ಹಾಗೂ ಮುಖ್ಯ ವಕ್ತಾರ ಸಂಜಯ್ ರಾವುತ್, "ಪ್ರಧಾನಿಯ ಪದವಿ ಕುರಿತ ವಿವರವನ್ನು ರಹಸ್ಯವೆಂಬಂತೆ ಏಕೆ ರಕ್ಷಿಸಲಾಗುತ್ತಿದೆ ಮತ್ತು ಜನರ ಮನಸ್ಸಿನಲ್ಲಿ ಅನುಮಾನ ಹುಟ್ಟಿಸಲಾಗುತ್ತಿದೆ?" ಎಂದು ಪ್ರಶ್ನಿಸಿದ್ದು, "ಪ್ರಧಾನಿಯ ಪದವಿಯನ್ನು ಜನರು ನಕಲಿ ಎಂದು ಕರೆಯುತ್ತಿದ್ದಾರೆ. ಆದರೆ, ನಾನು ಸಮಗ್ರ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆಯುವುದು ಐತಿಹಾಸಿಕ ಹಾಗೂ ಕ್ರಾಂತಿಕಾರಕ ಎಂದು ಪ್ರಾಮಾಣಿಕವಾಗಿ ನಂಬಿದ್ದೇನೆ. ಆದ್ದರಿಂದ ಅವರ ಪದವಿ ಪ್ರಮಾಣ ಪತ್ರವನ್ನು ನೂತನ ಸಂಸತ್ ಭವನದ ಮುಖ್ಯ ಪ್ರವೇಶ ದ್ವಾರದೆದುರು ಪ್ರದರ್ಶಿಸುವ ಮೂಲಕ ಜನ ಆ ಕುರಿತು ಅನುಮಾನ ಪಡುವುದನ್ನು ತಡೆಯಬೇಕು" ಎಂದು ಹೇಳಿದ್ದಾರೆ.

ಪ್ರಧಾನಿಯ ಪದವಿ ಕುರಿತು ವಿವರ ಕೇಳಿದ ಅರವಿಂದ್ ಕೇಜ್ರಿವಾಲ್ ಅವರಿಗೆ ಅದನ್ನು ನೀಡಲು ನಿರಾಕರಿಸಲಾಗಿದ್ದು, ಅವರಿಗೆ ರೂ. 25,000 ದಂಡವನ್ನೂ ವಿಧಿಸಲಾಗಿದೆ ಎಂದಿರುವ ಶಿವ ಸೇನೆ (ಉದ್ಧವ್ ಠಾಕ್ರೆ) ಬಣದ ನಾಯಕ, "ಪ್ರಧಾನಿ ಪದವಿಯ ಕುರಿತು ಬಚ್ಚಿಡುವಂಥದ್ದು ಏನಿದೆ?" ಎಂದು ಪ್ರಶ್ನಿಸಿದ್ದಾರೆ. ಮೋದಿಯೇ ಈ ಕುರಿತು ಮುಂದೆ ಬಂದು ಅವರ ಪದವಿ ವ್ಯಾಸಂಗದ ಕುರಿತು ಹರಡಿರುವ ಗಾಳಿ ಮಾತುಗಳಿಗೆ ಸ್ಪಷ್ಟೀಕರಣ ನೀಡಬೇಕು ಎಂದು ನಾವು ಬಯಸುತ್ತೇವೆ ಎಂದು ಸಂಜಯ್ ರಾವುತ್ ಆಗ್ರಹಿಸಿದ್ದಾರೆ.

ಈ ನಡುವೆ ಪ್ರಧಾನಿಯ ಪದವಿಯನ್ನು ನಕಲಿ ಎಂದು ಕರೆದಿರುವ ಪಕ್ಷದ ಮುಖವಾಣಿ ಪತ್ರಿಕೆಗಳಾದ "ಸಾಮ್ನಾ" ಹಾಗೂ "ದೋಪಹಾರ್ ಕಾ ಸಾಮ್ನಾ", ತಮ್ಮ ಸಂಪಾದಕೀಯಗಳಲ್ಲಿ ನರೇಂದ್ರ ಮೋದಿ ಮೇಲೆ ಟೀಕಾಪ್ರಹಾರ ನಡೆಸಿದ್ದು, ಅವರ ಪದವಿ ವಿಷಯವು ಪುನಃ ರಾಜಕೀಯ ವಲಯಗಳಲ್ಲಿ ಮುನ್ನೆಲೆಗೆ ಬಂದಿದೆ ಎಂದು ಹೇಳಿವೆ.

Similar News