"ಸಾಕಷ್ಟು ಸಾಕ್ಷ್ಯವಿದೆ": ಯಾಸೀನ್ ಭಟ್ಕಳ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಕೋರ್ಟ್ ಆದೇಶ
ಹೊಸದಿಲ್ಲಿ: ನಿಷೇಧಿತ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಸಹ-ಸ್ಥಾಪಕ ಯಾಸೀನ್ ಭಟ್ಕಳ್ ಹಾಗೂ ಸಂಘಟನೆಯ ಮೊಹಮ್ಮದ್ ದಾನಿಶ್ ಅನ್ಸಾರಿ ಸಹಿತ ಹಲವು ಮಂದಿಯ ವಿರುದ್ಧ 2012 ರಲ್ಲಿ ಭಾರತದ ವಿರುದ್ಧ ಯುದ್ಧ ಸಾರಲು ಸಂಚು ಹೂಡಿದ ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸಲು ದಿಲ್ಲಿಯ ನ್ಯಾಯಾಲಯ ಆದೇಶಿಸಿದೆ.
ಆರೋಪಿಗಳನ್ನು ವಿಚಾರಣೆಗೆ ಗುರಿಪಡಿಸಲು ಸಾಕಷ್ಟು ಪುರಾವೆ ಇದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಹೇಳಿದ್ದಾರೆ.
ಐಎಂ ಸದಸ್ಯರಾಗಿರುವ ಆರೋಪಿಗಳು ಭಾರತದ ವಿರುದ್ಧ ಯುದ್ಧ ಸಾರಲು ಕ್ರಿಮಿನಲ್ ಸಂಚು ಹೂಡಿದ್ದರೆಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ ಎಂದು ಮಾರ್ಚ್ 31 ರ ತನ್ನ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ತಮ್ಮ ಕ್ರಿಮಿನಲ್ ಸಂಚಿನ ಭಾಗವಾಗಿ ಐಎಂ ಗೆ ಸೇರಿದ ವ್ಯಕ್ತಿಗಳು ಉಗ್ರ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ದೊಡ್ಡ ಮಟ್ಟದಲ್ಲಿ ಹೊಸ ಸದಸ್ಯರನ್ನ ಭಾರತದ ವಿವಿಧೆಡೆ ನೇಮಕಗೊಳಿಸಿದ್ದರು ಹಾಗೂ ಅದಕ್ಕಾಗಿ ಪಾಕಿಸ್ತಾನ ಮೂಲದ ಸಹವತಿಗಳಿಂದ ಹಾಗೂ ಭಾರತದೊಳಗಿನ ಸ್ಲೀಪರ್ ಸೆಲ್‌ಗಳಿಂದ ಸಕ್ರಿಯ ಸಹಾಯ ಪಡೆದಿದ್ದರು ಹಾಗೂ ಭಾರತದ ವಿವಿಧೆಡೆ, ಪ್ರಮುಖವಾಗಿ ದಿಲ್ಲಿಯಲ್ಲಿ ಬಾಂಬ್ ಸ್ಫೋಟ ನಡೆಸುವ ಸಂಚು ಹೂಡಿದ್ದರು ಎಂದು ನ್ಯಾಯಾಲಯ ಹೇಳಿದೆ.
ಯಾಸೀನ್ ಭಟ್ಕಳ್ ಮತ್ತು ಅನ್ಸಾರಿ ಹೊರತುಪಡಿಸಿ ನ್ಯಾಯಾಲಯವು ಮುಹಮ್ಮದ್ ಅಫ್ತಾಬ್ ಆಲಂ, ಇಮ್ರಾನ್ ಖಾನ್, ಸಯೀದ್, ಒಬೈದ್ ಉರ್ ರೆಹಮಾನ್, ಅಸಾದುಲ್ಲಾ ಅಖ್ತರ್, ಉಜ್ಜೈರ್ ಅಹ್ಮದ್, ಮೊಹಮ್ಮದ್ ತೆಹ್ಸಿನ್ ಅಖ್ತರ್, ಹೈದರ್ ಅಲಿ ಮತ್ತು ಝಿಯಾ ಉರ್ ರೆಹಮಾನ್ ವಿರುದ್ಧ ಆರೋಪ ಪಟ್ಟಿ ಹೊರಿಸಲಾಗಿದೆ.
ನ್ಯಾಯಾಲಯದ ಆದೇಶದ ವಿರುದ್ಧ ಅಪೀಲು ಸಲ್ಲಿಸುವುದಾಗಿ ಪ್ರತಿವಾದಿಗಳ ವಕೀಲರು ತಿಳಿಸಿದ್ದಾರೆ.
ಅದೇ ಸಮಯ ಪ್ರಾಸಿಕ್ಯೂಶನ್ ಯಾವುದೇ ಮೇಲ್ನೋಟದ ಸಾಕ್ಷ್ಯ ಒದಗಿಸಲು ವಿಫಲವಾಗಿದೆ ಎಂದು ಹೇಳಿ ಮನ್ಝಾರ್ ಇಮಾಮ್, ಆರಿಝ್ ಖಾನ್ ,ಮತ್ತು ಅಬ್ದುಲ್ ವಾಹಿದ್ ಸಿದ್ದಿಬಾಪ ಅವರನ್ನು ದೋಷಮುಕ್ತಗೊಳಿಸಿದೆ.