ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯ ದೇಹವನ್ನು ಸುಂದರವಾಗಿಸುತ್ತದೆ: ಬಿಜೆಪಿ ಸಂಸದೆ ಮೇನಕಾ ಗಾಂಧಿ
ಹೊಸದಿಲ್ಲಿ: ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯ ದೇಹವನ್ನು ಸುಂದರವಾಗಿರಿಸುತ್ತದೆ ಎಂದು ಬಿಜೆಪಿ ಸಂಸದೆ ಹಾಗೂ ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಭಾಷಣವೊಂದರ ಭಾಗವಾಗಿ ಹೇಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಸುಲ್ತಾನಪುರ್ ಎಂಬಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮೇನಕಾ ಗಾಂಧಿ, "ಈಜಿಪ್ಟ್ ದೇಶದ ಪ್ರಸಿದ್ಧ ರಾಣಿ ಕ್ಲಿಯೋಪಾತ್ರ ಕತ್ತೆಯ ಹಾಲಿನಿಂದ ಸ್ನಾನ ಮಾಡುತ್ತಿದ್ದಳು. ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನಿನ ಬೆಲೆ ದಿಲ್ಲಿಯಲ್ಲಿ ರೂ. 500 ಆಗಿದೆ. ನಾವೇಕೆ ಆಡು ಮತ್ತು ಕತ್ತೆಯ ಹಾಲಿನಿಂದ ಸಾಬೂನು ತಯಾರಿಸಲು ಪ್ರಾರಂಭಿಸಬಾರದು?." ಎಂದು ಹೇಳಿದ್ದಾರೆ.
ಲಡಾಖ್‌ನಲ್ಲಿರುವ ಸಮುದಾಯವೊಂದು ಈ ರೀತಿ ಕತ್ತೆ ಹಾಲಿನಿಂದ ಸಾಬೂನು ತಯಾರಿಸುತ್ತದೆ ಎಂದು ಅವರು ಹೇಳಿಕೊಂಡರು. "ನೀವು ಕೊನೆಯ ಬಾರಿ ಯಾವಾಗ ಕತ್ತೆಯನ್ನು ನೋಡಿದ್ದೀರಿ? ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಢೋಬಿಗಳು ಕತ್ತೆಗಳನ್ನು ಬಳಸುವುದನ್ನು ನಿಲ್ಲಿಸಿದ್ದಾರೆ. ಲಡಾಖ್‌ನಲ್ಲಿನ ಸಮುದಾಯವೊಂದು ಕತ್ತೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಿ ಅವುಗಳ ಹಾಲು ಬಳಸಿ ಸಾಬೂನು ತಯಾರಿಸಲು ಆರಂಭಿಸಿದೆ. ಕತ್ತೆಯ ಹಾಲಿನಿಂದ ಮಾಡಿದ ಸಾಬೂನು ಮಹಿಳೆಯ ದೇಹವನ್ನು ಶಾಶ್ವತವಾಗಿ ಸುಂದರವಾಗಿಸುವುದು," ಎಂದು ಮೇನಕಾ ಹೇಳಿದ್ದಾರೆ.
ಇದನ್ನೂ ಓದಿ: ಮುಂಬೈಯಲ್ಲಿ ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ವಿಚಾರಣಾಧೀನ ಕೈದಿ: ಕಾರಣವೇನು ಗೊತ್ತೇ?