×
Ad

ಝಾರ್ಖಂಡ್: ಭದ್ರತಾ ಪಡೆಗಳೊಂದಿಗೆ ಘರ್ಷಣೆ; 5 ಮಾವೋವಾದಿಗಳ ಹತ್ಯೆ

Update: 2023-04-03 20:45 IST

ರಾಂಚಿ, ಎ. 3: ಝಾರ್ಖಂಡ್ ರಾಜ್ಯದ ಛಾತ್ರ ಜಿಲ್ಲೆಯ ಲವಲೊಂಗ್ ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ ನಲ್ಲಿ ಕನಿಷ್ಠ ಐವರು ಮಾವೋವಾದಿಗಳು ಹತರಾಗಿದ್ದಾರೆ. ಹತರಲ್ಲಿ ಮಾವೋವಾದಿಗಳ ವಿಶೇಷ ಪ್ರದೇಶ ಸಮಿತಿ (SAC) ಸದಸ್ಯ ಗೌತಮ್ ಪಾಸ್ವಾನ್ ಕೂಡ ಸೇರಿದ್ದಾನೆ. ಆತನ ತಲೆಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಉಪ ವಲಯ ಕಮಾಂಡರ್ಗಳಾದ ಅಮರ್ ಗಂಝು, ನಂದು ಮತ್ತು ಸಂಜೀವ್ ಭುಯಿಯಾನ್ ಮೃತರಲ್ಲಿ ಸೇರಿದ್ದಾರೆ.

ಎಸ್ಎಸಿ ಸದಸ್ಯರ ತಲೆಗೆ ತಲಾ 25 ಲಕ್ಷ ರೂಪಾಯಿ ಮತ್ತು ಉಪ ವಲಯ ಕಮಾಂಡರ್ಗಳ ತಲೆಗೆ ತಲಾ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಐವರು ಮಾವೋವಾದಿಗಳು ಹತರಾಗಿರುವ ಸುದ್ದಿಯನ್ನು ಎಸ್ಪಿ ರಾಕೇಶ್ ರಂಜನ್ ಖಚಿತಪಡಿಸಿದ್ದಾರೆ. ಕಾರ್ಯಾಚರಣೆ ಈಗಲೂ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಎರಡು ಎಕೆ-47 ರೈಫಲ್ ಗಳು, ಒಂದು ಐಎನ್ಎಸ್ಎಎಸ್ ಮತ್ತು ಎರಡು ಸಾಮಾನ್ಯ ರೈಫಲ್ ಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಗುಂಡಿನ ಕಾಳಗದಲ್ಲಿ ಮೃತಪಟ್ಟಿರುವ ಎಲ್ಲಾ ಐವರು ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕೆಲವು ಉನ್ನತ ಮಾವೋವಾದಿ ಕಮಾಂಡರ್ಗಳು ಛಾತ್ರ ಜಿಲ್ಲೆಯ ಲವಲೊಂಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಡಿನಲ್ಲಿ ಜಮಾಯಿಸಿದ್ದಾರೆ ಎಂಬ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದರು. ಮಾವೋ ನಿಗ್ರಹ ಕಾರ್ಯಾಚರಣೆಯಲ್ಲಿ ಸಿಆರ್ಪಿಎಫ್ನ ಕೋಬ್ರಾ ಬೆಟಾಲಿಯನ್, ಝಾರ್ಖಂಡ್ ಸಶಸ್ತ್ರ ಪೊಲೀಸ್ ಮತ್ತು ಐಆರ್ಬಿ ತಂಡಗಳು ಭಾಗವಹಿಸಿದವು.

ಕಾರ್ಯಾಚರಣೆ ಸೋಮವಾರ ಬೆಳಗ್ಗೆ 9 ಗಂಟೆಗೆ ಆರಂಭಗೊಂಡಿತು. ಭದ್ರತಾ ಸಿಬ್ಬಂದಿಯನ್ನು ಕಂಡ ಕೂಡಲೇ ಮಾವೋವಾದಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು. ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿದಾಗ ಐವರು ಮಾವೋವಾದಿ ಕಮಾಂಡರ್ಗಳು ಹತರಾದರು ಎಂದರು.

Similar News