×
Ad

ಭಾರತವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ದೊಡ್ಡ ಜವಾಬ್ದಾರಿ ಸಿಬಿಐ ಮೇಲಿದೆ: ಪ್ರಧಾನಿ ಮೋದಿ‌

Update: 2023-04-03 20:53 IST

ಹೊಸದಿಲ್ಲಿ,ಎ.3: ಭ್ರಷ್ಟಾಚಾರವು ಪ್ರಜಾಪ್ರಭುತ್ವ ಮತ್ತು ನ್ಯಾಯಕ್ಕೆ ದೊಡ್ಡ ತಡೆಯಾಗಿದೆ ಮತ್ತು ಭಾರತವನ್ನು ಅದರಿಂದ ಮುಕ್ತಗೊಳಿಸುವುದು ಸಿಬಿಐ(CBI)ನ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಸೋಮವಾರ ಇಲ್ಲಿ ಹೇಳಿದರು.

ಸಿಬಿಐನ ವಜ್ರಮಹೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಹೋರಾಡಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ತನ್ನ ಸರಕಾರಕ್ಕಿಲ್ಲ ಎಂದು ಒತ್ತಿ ಹೇಳಿದರು. ಯಾವುದೇ ಭ್ರಷ್ಟ ವ್ಯಕ್ತಿಯನ್ನು ಬಿಡಬಾರದು ಎನ್ನುವುದು ದೇಶ ಮತ್ತು ಅದರ ಪ್ರಜೆಗಳ ಆಶಯವಾಗಿದೆ ಎಂದರು.

ಭ್ರಷ್ಟಾಚಾರ ಕೇವಲ ಸಣ್ಣ ಅಪರಾಧವಲ್ಲ. ಅದು ಬಡವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ ಮತ್ತು ಹಲವಾರು ಅಪರಾಧಿಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ ಎಂದು ಹೇಳಿದ ಮೋದಿ,‘ನನ್ನ ಸರಕಾರವು ಅಭಿಯಾನದ ಮಾದರಿಯಲ್ಲಿ ಕಪ್ಪುಹಣ ಮತ್ತು ಬೇನಾಮಿ ಆಸ್ತಿಗಳ ವಿರುದ್ಧ ಕ್ರಮಗಳನ್ನು ಆರಂಭಿಸಿದೆ. ಭ್ರಷ್ಟರ ಜೊತೆಗೆ ಭ್ರಷ್ಟಾಚಾರಕ್ಕೆ ಕಾರಣಗಳ ವಿರುದ್ಧವೂ ನಾವು ಹೋರಾಡುತ್ತಿದ್ದೇವೆ ’ ಎಂದರು.

ವೃತ್ತಿಪರ ಮತ್ತು ದಕ್ಷ ಸಂಸ್ಥೆಗಳಿಲ್ಲದೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯವಲ್ಲ,ಹೀಗಾಗಿ ಸಿಬಿಐ ಬಹು ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದ ಮೋದಿ,ಇಂದಿಗೂ ಯಾವುದೇ ಪ್ರಕರಣ ಬಗೆಹರಿಯದೆ ಉಳಿದುಕೊಂಡಿದ್ದರೆ ಅದನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂಬ ಬೇಡಿಕೆಗಳಿವೆ. ಸಿಬಿಐ ತನ್ನ ಕೆಲಸಗಳು ಮತ್ತು ತಂತ್ರಗಳ ಮೂಲಕ ಜನರ ನಂಬಿಕೆಯನ್ನು ಗಳಿಸಿದೆ ಎಂದು ಹೇಳಿದರು.

ಭ್ರಷ್ಟಾಚಾರವನ್ನು ಅರ್ಹತೆಯ ಬಹುದೊಡ್ಡ ಶತ್ರು ಎಂದು ಬಣ್ಣಿಸಿದ ಪ್ರಧಾನಿ,ಅದು ಸ್ವಜನಪಕ್ಷಪಾತ ಮತ್ತು ವಂಶಪಾರಂಪರ್ಯ ಆಡಳಿತವನ್ನು ಪ್ರೋತ್ಸಾಹಿಸುತ್ತದೆ. ಇವೆರಡೂ ಹೆಚ್ಚಿದಾಗ ದೇಶದ ಶಕ್ತಿಯು ಕುಂದುತ್ತದೆ ಮತ್ತು ಅದು ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದರು.

Similar News