×
Ad

​ಕುಂದಾಪುರ: ​ಮೂರು ತಿಂಗಳಲ್ಲಿ ಸಮುದ್ರ ಸೇರಿದ 979 ಕಡಲಾಮೆ ಮರಿಗಳು!

ಕೋಡಿ-23, ಮರವಂತೆ, ಕೊಡೇರಿಯಲ್ಲಿ ಎರಡು ಗೂಡುಗಳು ಪತ್ತೆ

Update: 2023-04-03 20:56 IST

ಕುಂದಾಪುರ: ಕುಂದಾಪುರ ತಾಲೂಕಿನ ಸಮುದ್ರ ತೀರದಲ್ಲಿ ಆಲಿವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಗಳು ಇಟ್ಟ ನೂರಾರು ಮೊಟ್ಟೆಗಳು ಮರಿಯಾಗಿ ಇದೀಗ ಕಡಲ ಒಡಲು ಸೇರುತ್ತಿವೆ. ಈವರೆಗೆ 979 ಕಡಲಾಮೆಯ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲಾಗಿದೆ.

ಸಾಮಾನ್ಯವಾಗಿ ಕಡಲಾಮೆಗಳು ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಮೊಟ್ಟೆ ಇಡಲು ತೀರಕ್ಕೆ ಬರುತ್ತದೆ. ಅಲ್ಲಿನ ಸುರಕ್ಷತಾ ಸ್ಥಳಗಳನ್ನು ಗುರುತಿಸಿ ಮೊಟ್ಟೆ ಇಟ್ಟು ವಾಪಾಸ್ಸು ಸಮುದ್ರಕ್ಕೆ ಹೋಗುತ್ತದೆ. ಬಿಸಿಲಿನ ಶಾಖಾದಿಂದ ಮೊಟ್ಟೆಗಳು ಮರಿಯಾಗಿ ಕಡಲನ್ನು ಸೇರಿಕೊಳ್ಳುತ್ತದೆ. ಆದರೆ ಮೊಟ್ಟೆ ಒಡೆದು ಹೊರ ಬರುವ ಬಹುತೇಕ ಆಮೆ ಮರಿಗಳು ನಾಯಿ, ಪಕ್ಷಿಗಳಿಗೆ ಬಲಿಯಾಗುತ್ತಿದ್ದವು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಎಫ್‌ಎಸ್‌ಎಲ್ ಇಂಡಿಯಾ, ಕ್ಲೀನ್ ಕುಂದಾಪುರ ಯೋಜನೆಯ ಸ್ವಯಂಸೇವಕರು ಮತ್ತು ಸ್ಥಳೀಯ ಮೀನುಗಾರರು ಈ ಮೊಟ್ಟೆಗಳನ್ನು ನಾಯಿಗಳು ಮತ್ತು ಇತರ ಪ್ರಾಣಿಗಳು ತಿನ್ನದಂತೆ ರಕ್ಷಿಸಲು ಕೈಜೋಡಿಸಿಕೊಂಡಿದ್ದಾರೆ. ಅದಕ್ಕೆ ತೀರದಲ್ಲಿ ಪತ್ತೆಯಾಗುವ ಕಡಲಾಮೆಯ ಗೂಡುಗಳನ್ನು ಸಂರಕ್ಷಿಸುತ್ತಿದ್ದಾರೆ.

25 ಗೂಡುಗಳ ರಕ್ಷಣೆ

ಡಿಸೆಂಬರ್‌ನಿಂದ ಮಾರ್ಚ್ ತಿಂಗಳವರೆಗೆ ಅರಣ್ಯ ಇಲಾಖೆಯ ಕುಂದಾಪುರ ವಲಯ ವ್ಯಾಪ್ತಿಯ ಕುಂದಾಪುರ ಕೋಡಿಯಲ್ಲಿ 23, ತ್ರಾಸಿಯ ಮರವಂತೆಯಲ್ಲಿ ಒಂದು, ಉಪ್ಪುಂದ ಕೊಡೇರಿಯಲ್ಲಿ ಒಂದು ಸೇರಿದಂತೆ ಒಟ್ಟು 25 ಕಡಲಾಮೆ ಗೂಡುಗಳು ಪತ್ತೆಯಾಗಿವೆ. ಇವುಗಳನ್ನು ಮೀನಿನ ಬಲೆಯನ್ನು ಸುತ್ತ ಕಟ್ಟಿ ಹ್ಯಾಚರ್‌ಗಳಿಂದ ಸಂರಕ್ಷಿಸಲಾಗಿದೆ.

ಕೋಡಿ ಸೀವಾಕ್‌ನಿಂದ ಕಿನಾರೆವರೆಗಿನ 4-5ಕಿ.ಮೀ. ಉದ್ದದ ತೀರದಲ್ಲಿ ಒಟ್ಟು 23 ಕಡಲಾಮೆಯ ಗೂಡುಗಳು ಪತ್ತೆಯಾಗಿವೆ. ಇದರಲ್ಲಿ 14 ಗೂಡು ಗಳಿಂದ ಮರಿಗಳು ಹೊರಬಂದು ಕಡಲನ್ನು ಸೇರಿಕೊಂಡಿವೆ. ಅದೇ ರೀತಿ ಮರ ವಂತೆಯಲ್ಲಿರುವ ಒಂದು ಗೂಡಿನಲ್ಲಿರುವ ಮೊಟ್ಟೆಯೊಡೆದು ಮರಿಗಳು ಸಮುದ್ರಕ್ಕೆ ಹೋಗಿವೆ. ಇನ್ನು ಕೊಡೇರಿಯಲ್ಲಿ ಒಂದು ಮತ್ತು ಕೋಡಿಯಲ್ಲಿ 9 ಗೂಡುಗಳನ್ನು ಸುರಕ್ಷಿತವಾಗಿ ಇಡಲಾಗಿದೆ.

‘ಈವರೆಗೆ ಒಟ್ಟು 15 ಗೂಡುಗಳಿಂದ ಒಟ್ಟು 979 ಕಡಲಾಮೆ ಮರಿಗಳನ್ನು ಸುರಕ್ಷಿತವಾಗಿ ಕಡಲಿಗೆ ಬಿಡಲಾಗಿದೆ. ಸಾಮಾನ್ಯವಾಗಿ ಕಡಲಾಮೆಯ ಮೊಟ್ಟೆ ಗಳು 40-60 ದಿನಗಳಲ್ಲಿ ಒಡೆದು ಮರಿಗಳು ಹೊರಬರುತ್ತವೆ. ಉಳಿದ ಗೂಡು ಗಳಲ್ಲಿರುವ ಮೊಟ್ಟೆಗಳಿಗೆ ಇನ್ನು ಹೊರಬರುವ ಸಮಯ ಆಗಿಲ್ಲ. ಮೇ ತಿಂಗಳಲ್ಲಿ ಈ ಗೂಡುಗಳಲ್ಲಿರುವ ಮೊಟ್ಟೆಗಳು ಒಡೆದು ಮರಿಗಳು ಹೊರಬರುವ ಸಾಧ್ಯತೆ ಇದೆ’ ಎಂದು ಕುಂದಾಪುರ ವಲಯ ಉಪವಲಯ ಅರಣ್ಯಾಧಿಕಾರಿ ಗುರುರಾಜ್ ತಿಳಿಸಿದ್ದಾರೆ.

ಒಂದೇ ರಾತ್ರಿ 219 ಮರಿಗಳು

ಮೊಟ್ಟೆಗಳು ಒಡೆದು ಮರಿಗಳು ರಾತ್ರಿ 10ಗಂಟೆಯಿಂದ ಬೆಳಗಿನ ಜಾವ 4ಗಂಟೆಗಳ ಮಧ್ಯಾವಧಿಯಲ್ಲಿ ಸಮುದ್ರ ಸೇರುತ್ತವೆ. ಹಾಗೆ ಎ.1ರಂದು ರಾತ್ರಿ 219 ಮತ್ತು ಎ.2ರಂದು ರಾತ್ರಿ 55 ಕಡಲಾಮೆ ಮರಿಗಳು ಕಡಲಿಗೆ ಹೋಗಿ ರುವ ಬಗ್ಗೆ ಅರಣ್ಯ ಇಲಾಖೆ ವರದಿ ಮಾಡಿವೆ.

ಕಡಲಾಮೆಗಳು ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಮೊಟ್ಟೆ ಗಳನ್ನು ಇಡುತ್ತದೆ. ಆದರೆ ಈ ಬಾರಿ ಮೇ ತಿಂಗಳವರೆಗೂ ಮುಂದುವರೆಯುವ ಸಾಧ್ಯತೆ ಇದೆ. ಕಳೆದ ವರ್ಷ ನಮಗೆ 9 ಕಡಲಾಮೆ ಗೂಡುಗಳು ಪತ್ತೆಯಾಗಿದ್ದವು. ಇದರಿಂದ ಸಾವಿರಾರು ಮರಿಗಳು ಹೊರಬಂದು ಸಮುದ್ರ ಸೇರಿದ್ದವು. ಈ ಬಾರಿ ಅವುಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎನ್ನುತ್ತಾರೆ ಗುರುರಾಜ್.

ಕಡಲಾಮೆ ಮೊಟ್ಟೆ ಇಟ್ಟಿರುವ ಜಾಗದಲ್ಲಿ ಜನ ಓಡಾಟ ಇದ್ದರೂ ಅವರಿಗೆ ಕಡಲಾಮೆಗಳ ಬಗ್ಗೆ ಈಗಾಗಲೇ ಜಾಗೃತಿ ಮೂಡಿದೆ. ಬೀಚ್‌ನಲ್ಲಿ ಮೊಟ್ಟೆಗಳು ಕಂಡುಬಂದರೆ ಅವರೇ ಮಾಹಿತಿ ನೀಡುತ್ತಾರೆ. ಯಾವುದೇ ತೊಂದರೆ ಮಾಡು ವುದಿಲ್ಲ. ಆದರೆ ನಾಯಿಗಳ ಕಾಟ ಇರುವುದರಿಂದ ನಾವು ಗೂಡನ್ನು ಸುರಕ್ಷಿತ ವಾಗಿ ಇಡುತ್ತಿದ್ದೇವೆ ಮತ್ತು ಅದಕ್ಕೆ ಜಾಗೃತಿ ಮೂಡಿಸುವ ಬ್ಯಾನರ್ ಕೂಡ ಅಳವಡಿಸುತ್ತೇವೆ ಎಂದರು.

ಬೀಚ್ ಸ್ವಚ್ಛತೆಯಿಂದ ಗೂಡು ಹೆಚ್ಚಳ
ಕೆಲವೊಂದು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಕಡಲಾಮೆಗಳು ಮೊಟ್ಟೆಗಳನ್ನು ಇಡುತ್ತಿದ್ದವು. ಆದರೆ ಕ್ರಮೇಣ ಆ ಸ್ಥಳಗಳಿಗೆ ಆಮೆಗಳು ಬಂದು ಮೊಟ್ಟೆ ಇಡುವುದು ಕಡಿಮೆಯಾಯಿತು. ಅದಕ್ಕೆ ಕಾರಣ ಬೀಚ್‌ನಲ್ಲಿ ತುಂಬಿರುವ ಕಸ ಕಡ್ಡಿ, ತ್ಯಾಜ್ಯಗಳು.

ಕೋಡಿ ಕಡಲ ತೀರದಲ್ಲಿ ಕ್ಲೀನ್ ಕುಂದಾಪುರ ಯೋಜನೆಯ ಸ್ವಯಂ ಸೇವಕರು, ಎನ್‌ಜಿಓ ಮತ್ತು ಕೋಡಿ ಬ್ಯಾರೀಸ್ ಕಾಲೇಜಿನ ವಿದ್ಯಾರ್ಥಿಗಳು ನಡೆಸಿ ಸ್ವಚ್ಛತಾ ಕಾರ್ಯಕ್ರಮದ ನಂತರ ಕಡಾಲಮೆಗಳು ಮತ್ತೆ ಆ ನಿರ್ದಿಷ್ಟ ಸ್ಥಳಗಳಿಗೆ ವಾಪಾಸ್ಸು ಆಗಮಿಸಲು ಪ್ರಾರಂಭಿಸಿವೆ. ಸ್ವಚ್ಛತೆ ಇರುವಲ್ಲಿ ಕಡಲಾಮೆ ಗಳು ಬರುತ್ತವೆ. ಇದರ ಪರಿಣಾಮ ಗೂಡುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿವೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

Similar News