ಅದಾನಿ ಕುರಿತು ಚರ್ಚೆಗೆ ನಿರಾಕರಿಸಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ಕುರಿತು ಚರ್ಚಿಸಿದ ಸಂಸದೀಯ ಸಮಿತಿ

Update: 2023-04-05 11:35 GMT

ಹೊಸದಿಲ್ಲಿ: ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB)ನ ಪತನದ ಪರಿಣಾಮಗಳನ್ನು ಚರ್ಚಿಸಲು ಸೋಮವಾರ ಕರೆಯಲಾಗಿದ್ದ ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಪ್ರತಿಪಕ್ಷಗಳು ಅದಾನಿ ಗ್ರೂಪ್ ತನ್ನ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿತ್ತು ಎಂಬ ಆರೋಪಗಳ ಕುರಿತಂತೆ ಮಾರುಕಟ್ಟೆ ನಿಯಂತ್ರಕರ ವೈಫಲ್ಯದ ಬಗ್ಗೆ ತನಿಖೆಗೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದವು ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು thehindu.com ವರದಿ ಮಾಡಿದೆ.

ಭಾರತೀಯ ಸಂಸದೀಯ ಸಮಿತಿಯೊಂದು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಖಾಸಗಿ ಬ್ಯಾಂಕಿನ ಕುಸಿತದ ಪರಿಣಾಮಗಳ ಬಗ್ಗೆ ತನಿಖೆ ನಡೆಸಬಹುದಾದರೆ ಹಲವಾರು ದೇಶಿಯ ಹೂಡಿಕೆದಾರರು ಮತ್ತು ವಿಶೇಷವಾಗಿ SBI ಹಾಗೂ ಎಲ್ಐಸಿಗಳಲ್ಲಿ ತಮ್ಮ ಉಳಿತಾಯವನ್ನು ತೊಡಗಿಸಿರುವವರ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡಿರುವ ದೇಶಿಯ ಮಾರುಕಟ್ಟೆಯಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸಿರುವ ಪ್ರಕರಣದ ಬಗ್ಗೆ ಚರ್ಚಿಸಲು ಏಕೆ ಹಿಂಜರಿಯಬೇಕು ಎಂದು ಕಾಂಗ್ರೆಸ್ ಸಂಸದರಾದ ಪ್ರಮೋದ ತಿವಾರಿ ಮತ್ತು ಗೌರವ ಗೊಗೊಯ್ ಅವರು ಸಭೆಯಲ್ಲಿ ಬಲವಾಗಿ ವಾದಿಸಿದರು. ಎಸ್ಬಿಐ ಮತ್ತು ಎಲ್ಐಸಿ ಅದಾನಿ ಗ್ರೂಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದನ್ನೂ ಅವರು ಸಭೆಯು ಗಮನಕ್ಕೆ ತಂದರು.

ಪ್ರಕರಣದಲ್ಲಿ ಮೇಲ್ವಿಚಾರಣೆ ಕಾರ್ಯವಿಧಾನದಲ್ಲಿಯ ಸಮಸ್ಯೆಗಳು ಮತ್ತು ನಿಯಮಗಳ ಉಲ್ಲಂಘನೆಗಳ ಬಗ್ಗೆ ತನಿಖೆಗೆ ಆಗ್ರಹಿಸಿ ತಿವಾರಿ,ಗೊಗೊಯಿ ಮತ್ತು ಲೋಕಸಭಾ ಸಂಸದ ಮನೀಷ ತಿವಾರಿ ಅವರು ಜಂಟಿ ಪತ್ರವನ್ನು ಸಮಿತಿಯ ಅಧ್ಯಕ್ಷರಾದ ಬಿಜೆಪಿ ಸಂಸದ ಜಯಂತ ಸಿನ್ಹಾರಿಗೆ ಸಲ್ಲಿಸಿದ್ದರು.

ಮಾ.15ರಂದು ನಡೆದಿದ್ದ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಮೂಲತಃ ಈ ಬೇಡಿಕೆಯನ್ನೆತ್ತಿದ್ದರು. ಅದಾನಿ ಗ್ರೂಪ್ ಕುರಿತು ಹಿಂಡೆನ್ಬಗ್ ರೀಸರ್ಚ್ ಮಾಡಿರುವ ಆರೋಪಗಳ ಬಗ್ಗೆ ವಿವರಿಸಲು ಸೆಬಿ, ಆರ್ಬಿಐ ಮತ್ತು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವನ್ನು ಕರೆಸಬೇಕು ಎಂದು ಆಗ್ರಹಿಸಿದ್ದರು.

ವಿಷಯವು ವಿಚಾರಣಾಧೀನವಾಗಿದೆ: ಬಿಜೆಪಿ

ಸರ್ವೋಚ್ಚ ನ್ಯಾಯಾಲಯದಿಂದ ನೇಮಕಗೊಂಡಿರುವ ಸಮಿತಿಯು ಸೆಬಿಯ ಕರ್ತವ್ಯ ಲೋಪದ ಬಗ್ಗೆ ಪರಿಶೀಲನೆ ನಡೆಸುತ್ತಿರುವುದರಿಂದ ವಿಷಯವು ವಿಚಾರಣಾಧೀನವಾಗಿರುವುದು ಮಾತ್ರವಲ್ಲ,ಖಾಸಗಿ ಸಂಸ್ಥೆಯೊಂದರ ಕುರಿತು ತನಿಖೆಯನ್ನು ನಡೆಸುವುದು ಸಂಸದೀಯ ಸಮಿತಿಯ ಅಧಿಕಾರ ವ್ಯಾಪ್ತಿಯನ್ನೂ ಮೀರಿದೆ ಎಂದು ಮಾಜಿ ಕಾನೂನು ಸಚಿವ ರವಿಶಂಕರ ಪ್ರಸಾದ ನೇತೃತ್ವದ ಬಿಜೆಪಿ ಸದಸ್ಯರು ಮಾ.15ರ ಸಭೆಯಲ್ಲಿ ವಾದಿಸಿದ್ದರು.

‘ಅಮೆರಿಕದ ಬ್ಯಾಂಕೊಂದರ ಕುಸಿತದ ಪರಿಣಾಮ ಮತ್ತು ಅದನ್ನು ತಡೆಯಲು ಅಮೆರಿಕದ ನಿಯಂತ್ರಕರ ವೈಫಲ್ಯವನ್ನು ನಾವು ತನಿಖೆ ನಡೆಸಬಹುದು,ಆದರೆ ಅದಾನಿ ಗ್ರೂಪ್ಗೆ ಸಂಬಂಧಿಸಿದಂತೆ ಸೆಬಿಯ ಕರ್ತವ್ಯಲೋಪ ಪ್ರಕರಣದಲ್ಲಿ ತನಿಖೆಯು ನಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದೆ. ಇದು ಅಸಂಬದ್ಧ ’ ಎಂದು ಸಮಿತಿಯ ಸದಸ್ಯರೋರ್ವರು ಕಿಡಿಕಾರಿದರು.

ಸಭೆಯಲ್ಲಿ ಬಿರುಸಿನ ಚರ್ಚೆಗಳ ಬಳಿಕವೂ ಪ್ರಶ್ನೆಯು ಬಗೆಹರಿಯದೆ ಉಳಿದುಕೊಂಡಿದೆ. ಪ್ರತಿಪಕ್ಷ ಸದಸ್ಯರ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಮಿತಿಯ ಅಧ್ಯಕ್ಷ ಸಿನ್ಹಾ ನಿರಾಕರಿಸಿದ್ದಾರೆ,ಆದರೆ ಬೇಡಿಕೆಯನ್ನು ಪ್ರಸ್ತಾಪಿಸುವುದನ್ನು ತಾವು ಮುಂದುವರಿಸುವುದಾಗಿ ಪ್ರತಿಪಕ್ಷ ಸದಸ್ಯರು ಹೇಳಿದರು.

Similar News