ಉದ್ವಿಗ್ನತೆಯ ಮಧ್ಯೆ ಇಬ್ಬರು ಭಾರತೀಯ ಪತ್ರಕರ್ತರು ಬೀಜಿಂಗ್ ಗೆ ಮರಳುವುದನ್ನು ನಿಷೇಧಿಸಿದ ಚೀನಾ

Update: 2023-04-05 14:22 GMT

ಹೊಸದಿಲ್ಲಿ,ಎ.5: ಇಬ್ಬರು ಭಾರತೀಯ ಪತ್ರಕರ್ತರು ತನ್ನ ದೇಶಕ್ಕೆ ಮರಳುವುದನ್ನು ನಿಷೇಧಿಸಿರುವ ಚೀನಾ,ಅವರ ವೀಸಾಗಳನ್ನು ಸ್ತಂಭನಗೊಳಿಸಲಾಗಿದೆ ಎಂದು ಹೇಳಿದೆ.

ಚೀನಾದ ವಿದೇಶಾಂಗ ಸಚಿವಾಲಯದ ಅಧಿಕಾರಿಯೋರ್ವರು ಸರಕಾರಿ ಸ್ವಾಮ್ಯದ ಪ್ರಸಾರ ಭಾರತಿಯ ವರದಿಗಾರ ಅಂಶುಮನ್ ಮಿಶ್ರಾ ಮತ್ತು ದಿ ಹಿಂದು ಪತ್ರಿಕೆಯ ವರದಿಗಾರ ಅನಂತ ಕೃಷ್ಣನ್ ಅವರಿಗೆ ಮಂಗಳವಾರ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಇಬ್ಬರೂ ಪತ್ರಕರ್ತರು ಬೀಜಿಂಗ್ನಲ್ಲಿ ನೆಲೆಸಿದ್ದು,ಪ್ರಸ್ತುತ ಭಾರತದಲ್ಲಿದ್ದಾರೆ.

‌ಪಿಟಿಐ ವರದಿಗಾರ ಕೆಜೆಎಂ ವರ್ಮಾ ಮತ್ತು ಹಿಂದುಸ್ಥಾನ ಟೈಮ್ಸ್ ನ ಸುತೀರ್ಥ ಪತ್ರಾನೊಬಿಸ್ ಅವರಿಗೆ ಸದ್ಯಕ್ಕೆ ಚೀನಾದಲ್ಲಿ ಉಳಿಯಲು ಅವಕಾಶ ನೀಡಲಾಗಿದೆ. ಆದರೆ ಭಾರತವು ಚೀನಾದ ಪತ್ರಕರ್ತರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಆರೋಪಿಸಿರುವ ಚೀನಾದ ವಿದೇಶಾಂಗ ಸಚಿವಾಲಯವು ಅದನ್ನು ಪ್ರತಿಭಟಿಸಲು ಹೆಚ್ಚಿನ ಪ್ರತಿ ಕ್ರಮಗಳನ್ನು ಪರಿಗಣಿಸುತ್ತಿದೆ ಎಂದು ಮಾಧ್ಯಮ ವರದಿಯು ಹೇಳಿದೆ.

ಭಾರತದಲ್ಲಿ ವರದಿಗಾರಿಕೆಗೆ ಚೀನಿ ಪತ್ರಕರ್ತರಿಗೆ ಹೆಚ್ಚು ವೀಸಾಗಳನ್ನು ಚೀನಾ ಬಯಸಿದೆ ಎನ್ನಲಾಗಿದೆ. ಭಾರತವು ತನ್ನ ಪತ್ರಕರ್ತರಿಗೆ ಮೂರು ತಿಂಗಳ ಬದಲು ಒಂದು ವರ್ಷ ಅವಧಿಯ ವೀಸಾಗಳನ್ನು ನೀಡಬೇಕು ಎಂದೂ ಅದು ಆಗ್ರಹಿಸಿದೆ. ಚೀನಾ ಭಾರತೀಯ ಪತ್ರಕರ್ತರಿಗೆ ಒಂದು ವರ್ಷಕ್ಕೆ ವೀಸಾಗಳನ್ನು ನೀಡುತ್ತಿದೆ.

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿರಾಕರಿಸಿದ್ದರೆ,ದಿಲ್ಲಿಯಲ್ಲಿ ನೆಲೆಸಿದ್ದ ಅನೇಕ ಚೀನಿ ಪತ್ರಕರ್ತರು ಕೋವಿಡ್ ಸಂದರ್ಭದಲ್ಲಿ ಸ್ವದೇಶಕ್ಕೆ ತೆರಳಿದ್ದರು ಮತ್ತು ನಂತರ ಭಾರತಕ್ಕೆ ವಾಪಸಾಗಿಲ್ಲ ಎಂದು ಅನಾಮಿಕ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದರು. ಭಾರತದ ಕ್ರಮವು ಚೀನಾದ ಪ್ರತಿಕ್ರಿಯೆಯನ್ನು ಪ್ರಚೋದಿಸಿದೆ ಎಂದು ಹೇಳುವುದು ತಪ್ಪಾಗುತ್ತದೆ ಎಂದರು.

ಮಾನ್ಯ ವೀಸಾಗಳನ್ನು ಹೊಂದಿರುವ ಕೆಲವು ಚೀನಿ ಪತ್ರಕರ್ತರು ಭಾರತದಲ್ಲಿದ್ದು,ಅವರು ಬೇಕಾದರೆ ವರದಿಗಳನ್ನು ಮಾಡಬಹುದು ಎಂದೂ ಅವರು ತಿಳಿಸಿದರು.

10 ವರ್ಷಗಳ ಹಿಂದೆ ಭಾರತದಲ್ಲಿ ಸುಮಾರು ಒಂದು ಡಝನ್ನಷ್ಟಿದ್ದ ಚೀನಿ ಪತ್ರಕರ್ತರ ಸಂಖ್ಯೆ 2022ರ ಅಂತ್ಯದ ವೇಳೆಗೆ ನಾಲ್ಕಕ್ಕೆ ಇಳಿದಿತ್ತು. 2016ರಲ್ಲಿ ತಮ್ಮ ಪತ್ರಿಕೋದ್ಯಮ ವ್ಯಾಪ್ತಿಗೆ ಮೀರಿದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿ ಭಾರತವು ಚೀನಾದ ಸರಕಾರಿ ಸುದ್ದಿಸಂಸ್ಥೆ ಷಿನುವಾದ ಮೂವರು ಪತ್ರಕರ್ತರನ್ನು ಉಚ್ಚಾಟಿಸಿತ್ತು.

ಜೂನ್ 2020ರಲ್ಲಿ ಗಲ್ವಾನ್ ಘರ್ಷಣೆಗಳ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ.

Similar News