ಬಿಆರ್‌ಎಸ್ ಸದಸ್ಯರಿಂದ ರಾಹುಲ್ ಅನರ್ಹತೆ ಅಸ್ತ್ರ ಪ್ರಯೋಗ: ಬಿಜೆಪಿ ಸಂಸದನ ಅನರ್ಹತೆಗೆ ಪಟ್ಟು
ಹೈದರಾಬಾದ್: ರಾಹುಲ್‌ಗಾಂಧಿಯವರ ಅನರ್ಹತೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಬಿಆರ್‌ಎಸ್ ಸದಸ್ಯರು ಲೋಕಸಭೆಯಲ್ಲಿ ಬುಧವಾರ, ಬಂಧಿತ ಬಿಜೆಪಿ ಸಂಸದ ಹಾಗೂ ಬಿಜೆಪಿಯ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅನರ್ಹತೆಗೆ ಪಟ್ಟು ಹಿಡಿದರು.
ಸಂಜಯ್ ಕಮಾರ್ ವಿರುದ್ಧ ಎರಡು ವರ್ಷಕ್ಕಿಂತ ಅಧಿಕ ಜೈಲು ಶಿಕ್ಷೆಗೆ ಗುರಿಪಡಿಸಬಹುದಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಆದ್ದರಿಂದ ತಕ್ಷಣ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಬಿಆರ್‌ಎಸ್ ಸದಸ್ಯರು ಆಗ್ರಹಿಸಿದರು. ಬಿಜೆಪಿ ಸದಸ್ಯರು ಈ ಬಂಧನವನ್ನು ಟೀಕಿಸಿದರು ಹಾಗೂ ಇದು ರಾಜಕೀಯ ಪ್ರೇರಿತ ಕ್ರಮವಾಗಿದ್ದು, ಏಪ್ರಿಲ್ 8ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿಯ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ ಎಂದು ಪ್ರತಿಪಾದಿಸಿದರು.
ಭ್ರಷ್ಟಾಚಾರ ಆರೋಪ ಹಾಗೂ ಚುನಾವಣಾ ಹಿನ್ನಡೆಯಿಂದಾಗಿ ಬಿಆರ್‌ಎಸ್ ಬಂಧನಕ್ಕೆ ಮುಂದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಪಾದಿಸಿದ್ದಾರೆ.
ಹನುಮಕೊಂಡ ಜಿಲ್ಲಾ ನ್ಯಾಯಾಲಯದ ಎದುರು ಬಿಆರ್‌ಎಸ್ ಹಾಗೂ ಬಿಜೆಪಿ ಬೆಂಬಲಿಗರು ಜಮಾಯಿಸಿ ಪರಸ್ಪರರ ವಿರುದ್ಧ ಘೊಷಣೆ ಕೂಗಲು ಆರಂಭಿಸಿದಾಗ ಉದಿಗ್ನ ವಾತಾವರಣ ನಿರ್ಮಾಣವಾಯಿತು. ಈ ಹಂತದಲ್ಲಿ ಬಿಜೆಪಿಯ ರಘುನಂದನ್ ರಾವ್, ಈತಾಳ ರಾಜೇಂದ್ರ ಹಾಗೂ ರಾಜಾ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಇತರ ಆರೋಪಿಗಳ ಜತೆ ಪಿತೂರಿಯಲ್ಲಿ ಶಾಮೀಲಾಗಿರುವ ಸಂಜಯ್ 10ನೇ ತರಗತಿ ಪರೀಕ್ಷೆಯ ಹಿಂದಿ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿ ರಾಜ್ಯ ಸರ್ಕಾರದ ಘನತೆಗೆ ಧಕ್ಕೆ ತರಲು ಮುಂದಾಗಿದ್ದಾರೆ ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಲು ಕಾರಣರಾಗಿದ್ದಾರೆ ಎಂದು ಪೊಲೀಸರು ದೂರಿದ್ದಾರೆ. ಜತೆಗೆ ಮಾಜಿ ಪತ್ರಕರ್ತ ಬಿ.ಪ್ರಶಾಂತ್ ಎಂಬುವವರಿಗೆ ಈ ಪರಿಸ್ಥಿತಿಯ ಲಾಭ ಪಡೆಯಲು ಸೂಚಿಸಿದ್ದಾರೆ ಎಂದೂ ಆಪಾದಿಸಲಾಗಿದೆ. ತೆಲಂಗಾಣ ರಾಜ್ಯ ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆ) ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಸಂಜಯ್ ವಿರುದ್ಧ ಪ್ರಕರಣ ದಾಖಲಾಗಿದೆ.