ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ನೀಡಿದ್ದ ತಡೆಯಾಜ್ಞೆ ತೆರವು

Update: 2023-04-06 04:00 GMT

ಬೆಂಗಳೂರು, ಎ.6: ನಟಿ ರಮ್ಯಾ (Ramya/Divya Spandana) ಹಾಗೂ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಸಹಯೋಗದಲ್ಲಿ ನಿರ್ಮಾಣವಾಗುತ್ತರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಶೀರ್ಷಿಕೆಗೆ ಹೊರಡಿಸಲಾಗಿದ್ದ ತಾತ್ಕಾಲಿಕ ತಡೆಯಾಜ್ಞೆ ಆದೇಶವನ್ನು ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ತೆರವುಗೊಳಿಸಿದೆ. 

ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಸಿಟಿ ಸಿವಿಲ್ ಕೋರ್ಟ್ ತಳ್ಳಿ ಹಾಕಿದೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆಯು ತಾನು ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿದೆ. ಈ ಶೀರ್ಷಿಕೆಯನ್ನು ಬಳಸಲು ಬೇರೆ ಅವರಿಗೆ ಹಕ್ಕು ಇರುವುದಿಲ್ಲ. ಹೀಗೆ ಮಾಡಿದಲ್ಲಿ ಶೀರ್ಷಿಕೆಯ ಕೃತಿಚೌರ್ಯವಾಗುತ್ತದೆ. ಹೀಗಾಗಿ ಈ ಶೀರ್ಷಿಕೆಯ ಹೆಸರನ್ನು ಕೊಡಬಾರದು’ ಎಂದು ರಾಜೇಂದ್ರ ಸಿಂಗ್ ಬಾಬು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ಧ ನ್ಯಾಯಾಲಯ ಈ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು. 

ಇದೀಗ  ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ನಟಿ ರಮ್ಯಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲವು ‘ಹಾಡಿನ ಸಾಲುಗಳನ್ನು ಸಿನೆಮಾ ಟೈಟಲ್ ಆಗಿ ಬಳಸಿದರೆ ಅದು ಕಾಪಿರೈಟ್ ಆಗುವುದಿಲ್ಲ. ಈ ಟೈಟಲ್ ಅನ್ನು ರಮ್ಯಾ ಬೇರೆಯವರಿಂದ ಪಡೆದು ಕೊಂಡಿದ್ದಾರೆ. ಆದ್ದರಿಂದ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನೆಮಾದ ಚಿತ್ರೀಕರಣ ನಡೆಸಬಹುದು ಹಾಗೂ ಬಿಡುಗಡೆಯನ್ನೂ ಮಾಡಬಹುದು’ ಎಂದು ಆದೇಶಿಸಿದೆ.

ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯೋ ಮತ್ತು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಚಲನಚಿತ್ರವು ನಿರ್ಮಾಣವಾಗುತ್ತಿದೆ.

Similar News