×
Ad

ತಾಜ್‌ಮಹಲ್ ಧ್ವಂಸಗೊಳಿಸಿ, ಶಹಜಹಾನ್-ಮುಮ್ತಾಝ್ ಪ್ರೀತಿಯ ಕುರಿತು ತನಿಖೆ ನಡೆಸಬೇಕು ಎಂದ ಬಿಜೆಪಿ ಶಾಸಕ

Update: 2023-04-06 12:23 IST

ದಿಸ್ಪುರ್: 12ನೇ ತರಗತಿಯ ಪಠ್ಯಪುಸ್ತಕದಿಂದ ಎನ್‌ಸಿಇಆರ್‌ಟಿ ಮೊಘಲರ ಚರಿತ್ರೆಯ ಮೇಲಿನ ಕೆಲವು ಪಾಠಗಳನ್ನು ಕೈಬಿಟ್ಟಿರುವ ಕುರಿತು ವಿವಾದ ಭುಗಿಲೆದ್ದಿರುವಾಗಲೇ, ತಾಜ್‌ಮಹಲ್‌ (Taj Mahal) ಹಾಗೂ ಕುತುಬ್ ಮಿನಾರ್ ಅನ್ನು ಧ್ವಂಸಗೊಳಿಸಬೇಕು ಎಂದು ಹೇಳುವ ಮೂಲಕ ಅಸ್ಸಾಂ ಬಿಜೆಪಿ ಶಾಸಕ ರೂಪ್‌ಜ್ಯೋತಿ ಕುರ್ಮಿ (Rupjyoti Kurmi) ವಿವಾದ ಹುಟ್ಟುಹಾಕಿದ್ದಾರೆ. ಅಂತರ್ಜಾಲ ತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿರುವ ವಿಡಿಯೊವೊಂದರಲ್ಲಿ ಮೊಘಲ್ ಚಕ್ರವರ್ತಿ ಶಹಜಹಾನ್ ತನ್ನ ಪತ್ನಿ ಮುಮ್ತಾಜ್‌ರನ್ನು ನಿಜಕ್ಕೂ ಪ್ರೀತಿಸುತ್ತಿದ್ದನೆ ಎಂಬ ಕುರಿತು ತನಿಖೆ ನಡೆಸಬೇಕು ಎಂದು ರೂಪ್‌ಜ್ಯೋತಿ ಕುರ್ಮಿ ಆಗ್ರಹಿಸಿರುವುದು ಕಂಡು ಬಂದಿದೆ ಎಂದು hindustantimes.com ವರದಿ ಮಾಡಿದೆ.

ಇದಲ್ಲದೆ ಮೊಘಲ್ ಕಾಲಘಟ್ಟದ ಎರಡು ಸ್ಮಾರಕಗಳ ಸ್ಥಳದಲ್ಲಿ ದೇವಾಲಯಗಳನ್ನು ನಿರ್ಮಿಸಬೇಕು ಎಂದೂ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಮರಿಯಾನಿ ಕ್ಷೇತ್ರದ ಶಾಸಕರೂ ಆಗಿರುವ ರೂಪ್‌ಜ್ಯೋತಿ ಕುರ್ಮಿ, ದೇವಾಲಯ ನಿರ್ಮಾಣಕ್ಕೆ ನನ್ನ ಒಂದು ವರ್ಷದ ವೇತನವನ್ನು ಕೊಡುಗೆ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

"ತಾಜ್‌ಮಹಲ್ ಹಾಗೂ ಕುತುಬ್ ಮಿನಾರ್ ಸ್ಮಾರಕಗಳನ್ನು ಕೂಡಲೇ ಧ್ವಂಸಗೊಳಿಸಬೇಕು ಎಂದು ನಾನು ಪ್ರಧಾನ ಮಂತ್ರಿಯವರನ್ನು ಒತ್ತಾಯಿಸುತ್ತೇನೆ. ಈ ಎರಡು ಸ್ಮಾರಕಗಳ ಸ್ಥಳದಲ್ಲಿ ವಿಶ್ವದಲ್ಲೇ ಅತ್ಯಂತ ಸುಂದರವಾದ ದೇವಾಲಯಗಳನ್ನು ನಿರ್ಮಿಸಬೇಕು. ಈ ದೇವಾಲಯಗಳ ವಾಸ್ತುಶಿಲ್ಪಕ್ಕೆ ವಿಶ್ವದ ಬೇರಾವುದೇ ಸ್ಮಾರಕವೂ ಸಾಟಿಯಾಗಕೂಡದು" ಎಂದು ರೂಪ್‌ಜ್ಯೋತಿ ಕುರ್ಮಿ ಪ್ರತಿಪಾದಿಸಿದ್ದಾರೆ.

ಮುಮ್ತಾಝ್ ಮೃತಪಟ್ಟ ನಂತರ 17ನೇ ಶತಮಾನದ ಚಕ್ರವರ್ತಿಯು ಮತ್ತೆ ಮೂರು ವಿವಾಹಗಳನ್ನು ಏಕೆ ಮಾಡಿಕೊಂಡರು? ವಿಶ್ವದ ಏಳು ವಿಸ್ಮಯಗಳ ಪೈಕಿ ಒಂದಾದ ತಾಜ್‌ಮಹಲ್ ಅನ್ನು ಹಿಂದೂ ದೊರೆಗಳ ದುಡ್ಡಿನಲ್ಲಿ ನಿರ್ಮಿಸಲಾಗಿದೆ ಎಂದು ಅವರು ವಾದಿಸಿದ್ದಾರೆ.

"1526ರಲ್ಲಿ ಮೊಘಲರು ಭಾರತಕ್ಕೆ ಆಗಮಿಸಿದರು ಮತ್ತು ನಂತರ ತಾಜ್‌ಮಹಲ್ ನಿರ್ಮಿಸಿದರು. ಶಹಾಜಹಾನ್ ಹಿಂದೂ ದೊರೆಗಳ ದುಡ್ಡಿನಿಂದ ತಾಜ್‌ಮಹಲ್ ನಿರ್ಮಿಸಿದರು ಮತ್ತದು ನಮ್ಮ ದುಡ್ಡಾಗಿದೆ. ಶಹಜಹಾನ್ ತನ್ನ ನಾಲ್ಕನೆಯ ಪತ್ನಿಯ ನೆನಪಿಗಾಗಿ ತಾಜ್‌ಮಹಲ್ ನಿರ್ಮಿಸಿದರು. ಆತ ಏಳು ಮಂದಿಯನ್ನು ವಿವಾಹವಾಗಿದ್ದು ಮತ್ತು ಮುಮ್ತಾಝ್ ನಾಲ್ಕನೆಯ ಪತ್ನಿಯಾಗಿದ್ದಳು. ಒಂದು ವೇಳೆ ಆತ ಮುಮ್ತಾಜ್‌ಳನ್ನು ಅಷ್ಟು ಪ್ರೀತಿಸುತ್ತಿದ್ದರೆ, ಆಕೆ ಸಾವಿಗೀಡಾದ ನಂತರ ಮತ್ತೆ ಏಕೆ ಹಲವು ಪತ್ನಿಯರನ್ನು ವರಿಸಿದ?" ಎಂದು ರೂಪ್‌ಜ್ಯೋತಿ ಕುರ್ಮಿ ಪ್ರಶ್ನಿಸಿದ್ದಾರೆ.

ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ನಾಲ್ಕು ಬಾರಿಯ ಶಾಸಕ ರೂಪ್‌ಜ್ಯೋತಿ ಕುರ್ಮಿ, ಪ್ರೀತಿಯ ಸಾಕ್ಷಿ ಎಂದು ವ್ಯಾಪಕವಾಗಿ ಭಾವಿಸಲಾಗಿರುವ ತಾಜ್‌ಮಹಲ್ ಪ್ರೀತಿಯ ಸಂಕೇತವಲ್ಲ ಎಂದು ಹೇಳಿದ್ದಾರೆ.

Similar News