ಲೋಕಸಭೆ ಬಜೆಟ್ ಅಧಿವೇಶನ ಅಂತ್ಯ, ಸಂಸತ್ ಭವನದಿಂದ ವಿಜಯ್ ಚೌಕದ ತನಕ ವಿಪಕ್ಷಗಳ ತ್ರಿವರ್ಣ ಮೆರವಣಿಗೆ

Update: 2023-04-06 07:39 GMT

 ಹೊಸದಿಲ್ಲಿ:  ಬಿಜೆಪಿಯಿಂದ "ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ" ಎಂದು ಆರೋಪಿಸಿ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಗುರುವಾರ ಸಂಸತ್ ಭವನದಿಂದ ವಿಜಯ್ ಚೌಕ್‌ವರೆಗೆ ಗುರುವಾರ 'ತ್ರಿವರ್ಣ ಮೆರವಣಿಗೆ' ನಡೆಸಿದವು.

 ಕಾಂಗ್ರೆಸ್ ಅಲ್ಲದೆ ಡಿಎಂಕೆ, ಸಮಾಜವಾದಿ ಪಕ್ಷ, ಆರ್‌ಜೆಡಿ ಹಾಗೂ  ಎನ್‌ಸಿಪಿಯಂತಹ ಸಮಾನ ಮನಸ್ಕ ವಿರೋಧ ಪಕ್ಷಗಳ ಸಂಸದರು ಎಡಪಕ್ಷಗಳು ಬೆಳಿಗ್ಗೆ 11.30 ಕ್ಕೆ ತಮ್ಮ ಮೆರವಣಿಗೆಯನ್ನು ಆರಂಭಿಸಿದರು.

ಮೆರವಣಿಗೆಯ ನಂತರ ಪ್ರತಿಪಕ್ಷಗಳ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು , ‘ಮೋದಿ ಸರಕಾರ ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಮಾತನಾಡುತ್ತದೆ. ಆದರೆ ನುಡಿನಂತೆ ನಡೆಯುವುದಿಲ್ಲ. ಸಂಸತ್ ಕಲಾಪ  ಚರ್ಚೆಯಿಲ್ಲದೆ ಅಂತ್ಯವಾಗಲು ಸರಕಾರವೇ ಹೊಣೆ. ಹೀಗಾಗಿ ಸ್ಪೀಕರ್ ಓಂ ಬಿರ್ಲಾ ಸಂಜೆ ಕರೆದಿರುವ ಚಹಾ ಕೂಟಕ್ಕೆ 13 ವಿರೋಧ ಪಕ್ಷಗಳು ಭಾಗವಹಿಸುವುದಿಲ್ಲ ಎಂದರು.

ಲೋಕಸಭೆಯ ಬಜೆಟ್ ಅಧಿವೇಶನ ಗುರುವಾರ ನಿಗದಿಯಂತೆ ಕೊನೆಗೊಂಡಿದೆ, ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ಪಕ್ಷದ ಸಂಸದರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರಿಂದ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ ಎಂದು ಘೋಷಿಸಿದರು.

 ಗುರುವಾರ  ಸದನ ಸಭೆ ಸೇರುತ್ತಿದ್ದಂತೆಯೇ ಪ್ರತಿಭಟನೆ ಆರಂಭವಾಯಿತು.

ಅದಾನಿ-ಹಿಂಡೆನ್‌ಬರ್ಗ್ ವಿವಾದದ  ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸಿದರೆ, ಬಿಜೆಪಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್ ನಲ್ಲಿ ನೀಡಿರುವ  ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂಬ ತನ್ನ ಬೇಡಿಕೆಯನ್ನು ಮುಂದುವರಿಸಿತು.

Similar News