×
Ad

ಚೀನಾ ಮಧ್ಯಸ್ಥಿಕೆಯಲ್ಲಿ ಇರಾನ್-ಸೌದಿ ಒಪ್ಪಂದಕ್ಕೆ ಸಹಿ

Update: 2023-04-06 21:04 IST

ಟೆಹ್ರಾನ್, ಎ.6: ಚೀನಾದ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದದಂತೆ ಗುರುವಾರ ಮಧ್ಯಪ್ರಾಚ್ಯದ ಪ್ರತಿಸ್ಪರ್ಧಿಗಳಾದ ಇರಾನ್ ಮತ್ತು ಸೌದಿ ಅರೆಬಿಯಾದ ಉನ್ನತ ಅಧಿಕಾರಿಗಳು ಬೀಜಿಂಗ್ ನಲ್ಲಿ ಸಭೆಸೇರಿ ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆಗಾಗಿ ಒಟ್ಟಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಸಭೆಯ ಬಳಿಕ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಇರಾನ್ ನ ವಿದೇಶಾಂಗ ಸಚಿವ ಹೊಸೈನ್ ಅಮಿರ್- ಅಬ್ದುಲ್ಲಹಿಯಾನ್ ಮತ್ತು ಸೌದಿಯ ವಿದೇಶಾಂಗ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್, ದ್ವಿಪಕ್ಷೀಯ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಕಾರ್ಯ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಬೀಜಿಂಗ್ ಒಪ್ಪಂದದ ಅನುಷ್ಟಾನ ಮತ್ತು ಪರಸ್ಪರ ವಿಶ್ವಾಸ ಮತ್ತು ಸಹಕಾರ ಕ್ಷೇತ್ರಗಳನ್ನು ವಿಸ್ತರಿಸುವ ರೀತಿಯಲ್ಲಿ, ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ವೃದ್ಧಿಸುವ ರೀತಿಯಲ್ಲಿ ಅದನ್ನು ಸಕ್ರಿಯಗೊಳಿಸುವ ಪ್ರಾಮುಖ್ಯತೆಯನ್ನು ಎರಡೂ ಕಡೆಯವರು ಒತ್ತಿಹೇಳಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಒಪ್ಪಂದದ ಭಾಗವಾಗಿ ಎರಡು ದೇಶಗಳ ನಡುವೆ ವಿಮಾನಸಂಚಾರ ಪುನರಾರಂಭಿಸುವ ಮತ್ತು ಎರಡೂ ದೇಶದ ನಾಗರಿಕರಿಗೆ  ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸುವ ಸಾಧ್ಯತೆಯನ್ನು ಎರಡೂ ಕಡೆಯವರು ಅಧ್ಯಯನ ನಡೆಸಲಿದ್ದಾರೆ.

ಉಭಯ ಕಡೆಯವರು ದ್ವಿಪಕ್ಷೀಯ ಸಂಬಂಧಗಳ ಅಧಿಕೃತ ಪುನರಾರಂಭ ಮತ್ತು ಎರಡು ದೇಶಗಳ ರಾಯಭಾರ ಕಚೇರಿಗಳು ಹಾಗೂ ದೂತಾವಾಸಗಳ ಪುನರಾರಂಭದ ನಿಟ್ಟಿನಲ್ಲಿ ಚರ್ಚೆ ನಡೆಸಿ ತಮ್ಮ ಅಭಿಪ್ರಾಯ ಮಂಡಿಸಿದರು ಎಂದು ಇರಾನ್ನ ವಿದೇಶಾಂಗ ಇಲಾಖೆ ಹೇಳಿದೆ. 7 ವರ್ಷಕ್ಕೂ ಹೆಚ್ಚಿನ ಅವಧಿಯ ಬಳಿಕ ಉಭಯ ದೇಶಗಳ ವಿದೇಶಾಂಗ ಸಚಿವರ ನಡುವಿನ ಪ್ರಥಮ ಅಧಿಕೃತ ಸಭೆಯು ಚೀನಾದ ಸಕ್ರಿಯ ರಾಜತಾಂತ್ರಿಕ ಮಧ್ಯಸ್ಥಿಕೆಯಲ್ಲಿ ಯಶಸ್ವಿಯಾಗಿದೆ ಎಂದು ಚೀನಾದ ಸಿಸಿಟಿವಿ ವಾಹಿನಿಯ ಪ್ರಸಾರದಲ್ಲಿ ಉಲ್ಲೇಖಿಸಲಾಗಿದೆ.

ಈ ಒಪ್ಪಂದದಂತೆ ಉಭಯ ದೇಶಗಳು ಎರಡು ತಿಂಗಳೊಳಗೆ ತಮ್ಮ ರಾಯಭಾರ ಕಚೇರಿ ಮತ್ತು ದೂತಾವಾಸಗಳನ್ನು ಆರಂಭಿಸಲು ಹಾಗೂ 20 ವರ್ಷಕ್ಕೂ ಹಿಂದೆ ಸಹಿಹಾಕಲಾದ ಭದ್ರತೆ ಮತ್ತು ಸಹಕಾರ ಒಪ್ಪಂದವನ್ನು ಅನುಷ್ಟಾನಗೊಳಿಸಲು ಸಾಧ್ಯವಾಗಲಿದೆ ಎಂದು ಮಾಧ್ಯಮಗಳ ವರದಿ ಹೇಳಿದೆ.

ಅಮೆರಿಕಕ್ಕೆ ಸವಾಲು

ಬದ್ಧ ಪ್ರತಿಸ್ಪರ್ಧಿಗಳಾದ ಇರಾನ್ ಮತ್ತು ಸೌದಿ ಅರೇಬಿಯಾವನ್ನು ಒಪ್ಪಂದದ ಸೂತ್ರದಡಿ ತರುವಲ್ಲಿ ಚೀನಾ ಯಶಸ್ವಿಯಾಗಿರುವುದು, ಮಧ್ಯಪ್ರಾಚ್ಯದಲ್ಲಿ ಯಾವುದೇ ಒಪ್ಪಂದಕ್ಕೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬಲ್ಲ ಏಕೈಕ ಪ್ರಭಾವೀ ದೇಶ ಎಂಬ ಅಮೆರಿಕದ ದೀರ್ಘಾವಧಿಯ ಸ್ಥಾನಮಾನಕ್ಕೆ ಸವಾಲೆಸೆದಿದೆ.

ಚೀನಾವು ಇರಾನ್ ನ ಪ್ರಬಲ ಬೆಂಬಲಿಗನಾಗಿರುವುದರಿಂದ ಒಪ್ಪಂದವನ್ನು ಅನುಸರಿಸುವ ಇರಾನ್ ನ ಸಾಮರ್ಥ್ಯದ ಬಗ್ಗೆ ಸೌದಿಯು ಹೆಚ್ಚಿನ ವಿಶ್ವಾಸ ಹೊಂದಬಹುದು ಎಂದು ಅಮೆರಿಕದ ಕಾನೂನು ವ್ಯವಹಾರಗಳ ಮಾಜಿ ಉಪ ಸಹಾಯಕ ಕಾರ್ಯದರ್ಶಿ ಜೊಯೆಲ್ ರೂಬಿನ್ ಹೇಳಿದ್ದಾರೆ.

ಪರಸ್ಪರ ಉದ್ವಿಗ್ನತೆ ತಪ್ಪಿಸುವ ಈ ಒಪ್ಪಂದವನ್ನು ಸ್ವಾಗತಿಸುವುದಾಗಿ ಅಮೆರಿಕ ಪ್ರತಿಕ್ರಿಯಿಸಿದೆ. ಆದರೆ ಇರಾನ್ ತನ್ನ ಪಾಲಿನ ಒಪ್ಪಂದವನ್ನು ಪಾಲಿಸಲಿದೆಯೇ ಎಂಬುದು ಇಲ್ಲಿನ ಪ್ರಶ್ನೆಯಾಗಿದೆ ಎಂದು ಅಮೆರಿಕದ ಉನ್ನತ ಮೂಲಗಳು ಹೇಳಿವೆ.

ಈ ವಲಯದಾದ್ಯಂತದ ಹಲವು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಇರಾನ್ ಮತ್ತು ಸೌದಿ ಪ್ರತಿಸ್ಪರ್ಧಿ ಪಕ್ಷಗಳನ್ನು ಬೆಂಬಲಿಸುತ್ತವೆ. ಯೆಮನ್ನಲ್ಲಿ ಇರಾನ್ ಹೌದಿ ಬಂಡುಗೋರರನ್ನು ಬೆಂಬಲಿಸಿದರೆ, ಸೌದಿ ಅರೆಬಿಯಾದ ನೇತೃತ್ವದ ಮಿತ್ರಪಡೆಗಳು ಯೆಮನ್ ಸರಕಾರದ ಪಡೆಯನ್ನು ಬೆಂಬಲಿಸುತ್ತಿವೆ. ಸಿರಿಯಾ, ಲೆಬನಾನ್ ಮತ್ತು ಇರಾಕ್ನಲ್ಲೂ ಇದೇ ಪರಿಸ್ಥಿತಿಯಿದೆ. 

Similar News