ಆಕ್ಸ್‌ಫಾಮ್ ಇಂಡಿಯಾ ವಿರುದ್ಧ ಸಿಬಿಐ ತನಿಖೆಗೆ ಗೃಹ ಸಚಿವಾಲಯ ಶಿಫಾರಸು
ಎನ್ಜಿಒ ಎಫ್‌ಸಿಆರ್‌ಎ ನಿಯಮಗಳನ್ನು ಉಲ್ಲಂಘಿಸಿದೆ ಎಂದ ಸರಕಾರ
ಹೊಸದಿಲ್ಲಿ, ಎ. 6: ಆಕ್ಸ್ಫಾಮ್ ಇಂಡಿಯಾವು ಎಫ್‌ಸಿಆರ್‌ಎ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯವು ಗುರುವಾರ ಶಿಫಾರಸು ಮಾಡಿದೆ.
ಆಕ್ಸ್ಫಾಮ್ ಇಂಡಿಯಾವು ದುರ್ಬಲ ವರ್ಗಗಳ ಆಹಾರ, ಸೂರು ಮತ್ತು ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿರುವ ಅತಿ ದೊಡ್ಡ ಸರಕಾರೇತರ ಸಂಘಟನೆ (ಎನ್ಜಿಒ)ಗಳ ಪೈಕಿ ಒಂದಾಗಿದೆ.
ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ)ಯಡಿ ಆಕ್ಸ್ಫಾಮ್ ಇಂಡಿಯಾದ ನೋಂದಣಿಯನ್ನು ಗೃಹ ಸಚಿವಾಲಯವು 2021ರಲ್ಲಿ ನವೀಕರಿಸಿಲ್ಲ. ಈ ಕಾಯ್ದೆಯಡಿ ನೋಂದಣಿಯಾದರೆ ಮಾತ್ರ ಯಾವುದೇ ಸಂಸ್ಥೆಯು ವಿದೇಶಗಳಿಂದ ನಿಧಿಯನ್ನು ಪಡೆಯಬಹುದಾಗಿದೆ.
ಈ ಸಂಸ್ಥೆಯನ್ನು ಸಾಮಾಜಿಕ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಎಫ್ಸಿಆರ್ಎ ಅಡಿ ನೋಂದಾಯಿಸಲಾಗಿತ್ತು ಹಾಗೂ ಅದರ ನೋಂದಣಿಯು 2021 ಡಿಸೆಂಬರ್ 31ರವರೆಗೆ ಸಿಂಧುವಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಕಾಯ್ದೆ, 2020 ಜಾರಿಗೆ ಬಂದ ಬಳಿಕವೂ ಆಕ್ಸ್ಫಾಮ್ ವಿದೇಶಿ ನಿಧಿಗಳನ್ನು ವಿವಿಧ ಇತರ ಸಂಸ್ಥೆಗಳಿಗೆ ವರ್ಗಾಯಿಸುವುದನ್ನು ಮುಂದುವರಿಸಿತು. ಇದನ್ನು ತಿದ್ದುಪಡಿ ಕಾಯ್ದೆಯು ನಿಷೇಧಿಸುತ್ತದೆ.
ಆದಾಯ ತೆರಿಗೆ ಅಧಿಕಾರಿಗಳು 2022 ಸೆಪ್ಟಂಬರ್ 7ರಂದು ಆಕ್ಸ್ಫಾಮ್ ಇಂಡಿಯಾ ಮತ್ತು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ಸಂಸ್ಥೆಗಳ ಕಚೇರಿಗಳಲ್ಲಿ ಶೋಧ ನಡೆಸಿದ್ದರು. ಈಗ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ. ಸಿಪಿಆರ್ ಎನ್ನುವುದು ಇನ್ನೊಂದು ಜನಾಭಿಪ್ರಾಯ ರೂಪಿಸುವ ಎನ್ಜಿಓ ಆಗಿದೆ.
ವಿದೇಶಿ ನಿಧಿಗಳನ್ನು ಇತರ ಎಫ್‌ಸಿಆರ್‌ಎ ನೋಂದಾಯಿತ ಸಂಸ್ಥೆಗಳಿಗೆ ವರ್ಗಾಯಿಸುವ ಮೂಲಕ ಅಥವಾ ಶುಲ್ಕ ಪಡೆಯುವ ಕನ್ಸಲ್ಟೆನ್ಸಿ ವಿಧಾನದ ಮೂಲಕ ಎಫ್‌ಸಿಆರ್‌ಎ ನಿಯಮಗಳಿಂದ ಪಾರಾಗುವ ಯೋಜನೆಯನ್ನು ಆಕ್ಸ್ಫಾಮ್ ಇಂಡಿಯಾವು ಹೊಂದಿತ್ತು ಎನ್ನುವುದನ್ನು ಆದಾಯ ತೆರಿಗೆ ಇಲಾಖೆಯ ಶೋಧದ ವೇಳೆ ಪತ್ತೆಯಾಗಿರುವ ಇಮೇಲ್ಗಳು ಬಹಿರಂಗಗೊಳಿಸಿವೆ ಎಂದು ಅಧಿಕಾರಿ ಹೇಳಿದರು.
2020ರ ತಿದ್ದುಪಡಿಯಲ್ಲಿ ಹೇಳಿರುವಂತೆ, ನಿಯೋಜಿತ ಎಫ್ಸಿಆರ್ಎ ಖಾತೆಯಲ್ಲಿ ವಿದೇಶಿ ದೇಣಿಗೆಯನ್ನು ಸ್ವೀಕರಿಸುವ ಬದಲು, ಆಕ್ಸ್ಫಾಮ್ 1.5 ಕೋಟಿ ರೂ. ವಿದೇಶಿ ದೇಣಿಗೆಯನ್ನು ನೇರವಾಗಿ ತನ್ನ ಬಳಕೆ ಖಾತೆಯಲ್ಲಿ ಸ್ವೀಕರಿಸಿದೆ ಎಂದು ಅಧಿಕಾರಿ ಹೇಳಿದರು. ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸದಿರುವ ಸಚಿವಾಲಯದ ನಿರ್ಧಾರವನ್ನು ಆಕ್ಸ್ಫಾಮ್ ದಿಲ್ಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದೆ.