ಅತಿಯಾದ ಆತ್ಮವಿಶ್ವಾಸ ಬೇಡ: ಬಿಜೆಪಿ ಸಂಸ್ಥಾಪನಾ ದಿನ ಭಾಷಣದಲ್ಲಿ ಮೋದಿ

Update: 2023-04-07 02:19 GMT

ಹೊಸದಿಲ್ಲಿ: ಬಿಜೆಪಿ 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಜ್ಜಾಗಿದ್ದರೂ, ಪಕ್ಷದ ಕಾರ್ಯಕರ್ತರು ಆತ್ಮತೃಪ್ತಿಯಿಂದ ಕೈಕಟ್ಟಿ ಕೂರುವ ಬದಲು ಜನಬೆಂಬಲ ಗಳಿಸಲು ಬದ್ಧತೆ ಹಾಗೂ ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಓದಿ ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

"ಅತಿಯಾದ ಆತ್ಮವಿಶ್ವಾಸದ ಸಂತ್ರಸ್ತರಾಗಬೇಡಿ. 2024ರಲ್ಲಿ ಬಿಜೆಪಿಯನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಜನ ಈಗಾಗಲೇ ಮಾತನಾಡಿಕೊಳ್ಳುತ್ತಿದ್ದಾರೆ. ಇದು ನಿಜ; ಆದರೆ ಬಿಜೆಪಿ ಕಾರ್ಯಕರ್ತರು ಪ್ರತಿಯೊಬ್ಬ ನಾಗರಿಕರ ಹೃದಯ ಗೆಲ್ಲಬೇಕು. ಬಿಜೆಪಿ ಕಾರ್ಯಕರ್ತರಾಗಿ ನಾವು ಚುನಾವಣೆಗಳನ್ನು ಗೆಲ್ಲಲು ಮಾತ್ರ ನಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು. ಜನರ ಹೃದಯ ಗೆಲ್ಲುವ ಕೆಲಸವನ್ನು ನಾವು ಮಾಡಬೇಕು" ಎಂದು ಬಿಜೆಪಿ ಸಂಸ್ಥಾಪನಾ ದಿನದ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು.

2024ರ ಲೋಕಸಭಾ ಚುನಾವಣೆಗಾಗಿ "ಏಕ್ ಬಾರ್ ಫಿರ್ ಸೇ ಮೋದಿ ಸರ್ಕಾರ್, ಏಕ್ ಬಾರ್ ಫಿರ್ ಸೇ ಭಾಜ್ಪಾ ಸರ್ಕಾರ್’ ಪ್ರಚಾರ ಅಭಿಯಾನಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಜಾತ್ಯತೀತ ರಂಗವನ್ನು ರಚಿಸುವ ಬಗೆ ವಿರೋಧ ಪಕ್ಷಗಳಲ್ಲಿ ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ ಬಿಜೆಪಿ ಮುಂದಿನ ವರ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ.

ಪಕ್ಷ ಚುನಾವಣಾ ಪ್ರಚಾರಕ್ಕೆ ಸಜ್ಜಾದ ಇತರ ಸೂಚನೆಗಳೂ ಕಾಣುತ್ತಿದ್ದು, ಮೇ 15ರಿಂದ ಒಂದು ತಿಂಗಳು ಎಲ್ಲ ಕೇಂದ್ರ ಸಚಿವರು ರಾಜ್ಯಗಳಲ್ಲಿ ಕಳೆಯಬೇಕು ಎಂಬ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

Similar News