×
Ad

ಹೊಸ ಬೆಲೆನಿಗದಿ ನೀತಿ: ಪಿಎನ್‌ಜಿ, ಸಿಎನ್‌ಜಿ ನಾಳೆಯಿಂದ ಅಗ್ಗ

Update: 2023-04-07 09:55 IST

ಹೊಸದಿಲ್ಲಿ: ದೇಶೀಯವಾಗಿ ಉತ್ಪಾದಿಸಲಾದ ನೈಸರ್ಗಿಕ ಅನಿಲದ ಬೆಲೆಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲದ ಬೆಲೆ ಜತೆ ಸಂಪರ್ಕಿಸುವ ಹೊಸ ಬೆಲೆನಿಗದಿ ನೀತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅನಿಲ ಸಮೃದ್ಧ ದೇಶಗಳಾದ ಅಮೆರಿಕ, ಕೆನಡಾ, ರಷ್ಯಾದಲ್ಲಿನ ಅನಿಲ ಬೆಲೆಯ ಆಧಾರದಲ್ಲಿ ಈ ಹಿಂದೆ ಬೆಲೆ ನಿಗದಿಪಡಿಸಲಾಗುತ್ತಿತ್ತು.

ಗುರುವಾರ ರಾತ್ರಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಇದರಿಂದಾಗಿ ಮನೆಗಳಿಗೆ ಪೈಪ್‌ಲೈನ್ ಮೂಲಕ ಸರಬರಾಜು ಮಾಡಲಾಗುವ ನೈಸರ್ಗಿಕ ಅನಿಲ (ಪಿಎನ್‌ಜಿ) ಹಾಗೂ ವಾಹನಗಳಿಗೆ ಬಳಸಲಾಗುವ ಕಂಪ್ರೆಸ್ ಮಾಡಲಾದ ನೈಸರ್ಗಿಕ ಅನಿಲ (ಸಿಎನ್‌ಜಿ) ದರ ಶನಿವಾರದಿಂದ ಶೇಕಡ 11ರಷ್ಟು ಅಗ್ಗವಾಗಲಿದೆ.

ಸಚಿವ ಸಂಪುಟದ ಈ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, "ಬಿಜೆಪಿಯ ಸಂಸ್ಥಾಪನಾ ದಿನದ ಸಂದರ್ಭದಲ್ಲೇ ದೇಶದ ಲಕ್ಷಾಂತರ ಗ್ರಾಹಕರು, ಅದರಲ್ಲೂ ಮುಖ್ಯವಾಗಿ ದೇಶದ ಪಿಎನ್‌ಜಿ ಹಾಗೂ ಸಿಎನ್‌ಜಿ ಬಳಕೆದಾರರು ನಿರಾಳವಾಗುವಂಥ ನಿರ್ಧಾರವನ್ನು ಕೈಗಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಂಸ್ಥಾಪನಾ ದಿನದ ಕೊಡುಗೆಯನ್ನು ನೀಡಿದ್ದಾರೆ.. ಇದು ಎಲ್ಲ ಕುಟುಂಬಗಳಿಗೆ, ಕೈಗಾರಿಕೆಗಳಿಗೆ ಮತ್ತು ಕೃಷಿಕರಿಗೆ ಪ್ರಯೋಜನ ನೀಡುವ ಉತ್ತಮ ನಿರ್ಧಾರ.. ಇದು ಉತ್ತಮ ದಿನ" ಎಂದು ಬಣ್ಣಿಸಿದರು.

ಹೊಸ ನೀತಿಯ ಅನ್ವಯ ನೈಸರ್ಗಿಕ ಅನಿಲದ ಬೆಲೆ ಇಂಡಿಯನ್ ಕ್ರೂಡ್ ಬಾಸ್ಕೆಟ್‌ನ ಮಾಸಿಕ ಸರಾಸರಿಯ ಶೇಕಡ 10ರಷ್ಟಾಗಿರುತ್ತದೆ ಹಾಗೂ ಪ್ರತಿ ತಿಂಗಳು ಇದನ್ನು ಪ್ರಕಟಿಸಲಾಗುತ್ತದೆ ಎಂದು ವಿವರ ನೀಡಿದರು.

ಪುಣೆಯಲ್ಲಿ ಸಿಎನ್‌ಜಿ ದರ ಕೆಜಿಗೆ 92 ರೂಪಾಯಿ ಇದ್ದರೆ ಅದು 87ಕ್ಕೆ ಇಳಿಯಲಿದೆ. ಅಂತೆಯೇ ಪಿಎನ್‌ಜಿ ದರ 57 ರೂಪಾಯಿಯ ಬದಲು 52 ರೂಪಾಯಿ ಆಗಲಿದೆ. ಮುಂಬೈನಲ್ಲಿ ಇದು 54 ರೂಪಾಯಿ ಇದ್ದರೆ 52 ರೂಪಾಯಿ, ದೆಹಿಯಲ್ಲಿ 53.49 ರೂಪಾಯಿಯಿಂದ 47.49 ರೂಪಾಯಿಗೆ ದರ ಇಳಿಯಲಿದೆ. ಬೆಂಗಳೂರಿನಲ್ಲಿ ಪಿಎನ್‌ಜಿ ಬೆಲೆ 58.2 ರೂಪಾಯಿಗಳಿಂದ 52 ರೂಪಾಯಿಗೆ ಇಳಿಯಲಿದೆ ಎಂದು ಸ್ಪಷ್ಟಪಡಿಸಿದರು.

ಎಪಿಎಂ ಅಥವಾ ಅಡ್ಮಿನಸ್ಟರ್ಡ್‌ ಪ್ರೈಸ್ ಮೆಕ್ಯಾನಿಸಂ, ಓಎನ್‌ಜಿಸಿ ಹಾಗೂ ಆಯಿಲ್ ಇಂಡಿಯಾ ಲಿಮಿಟೆಡ್‌ನಂಥ ಸರ್ಕಾರಿ ಸ್ವಾಮ್ಯದ ತೈಲ ನಿಕ್ಷೇಪ ಹೊರತೆಗೆಯುವ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಈ ನಿಕ್ಷೇಪಗಳನ್ನು ಹರಾಜು ಮಾಡುವ ಬದಲು ನಾಮನಿರ್ದೇಶನ ಆಧಾರದಲ್ಲಿ ಹಂಚಿಕೆ ಮಾಡಲಾಗಿರುತ್ತದೆ.

Similar News