ಮಣಿಪಾಲ ಕೆಎಂಸಿಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ
ಆರೋಗ್ಯ ಜಾಗೃತಿ, ಅರಿವು ಮೂಡಿಸುವ ಶಿಲ್ಪ ಅನಾವರಣ
ಮಣಿಪಾಲ: ಮೊದಲೆಲ್ಲ ಸೋಂಕು ಕಾಯಿಲೆಗಳು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿ ಸುವ ಅವಶ್ಯಕತೆ ಇತ್ತು. ಆದರೆ ಈಗ ಅಸಾಂಕ್ರಾಮಿಕ ಮತ್ತು ಜೀವನಶೈಲಿಯಿಂದ ಬರುವ ಕಾಯಿಲೆಗಳು, ಮಧುಮೇಹ, ಹೃದ್ರೋಗ, ಕಿಡ್ನಿ ಇತ್ಯಾದಿಗಳ ತಡೆಗಟ್ಟುವ ಮಾಹಿತಿ ಮತ್ತು ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಉಡುಪಿ ಜಿಲ್ಲಾ ಸರ್ವಲೆನ್ಸ್ ಆಫೀಸರ್ ಡಾ. ನಾಗರತ್ನ ಹೇಳಿದ್ದಾರೆ.
ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಮುದಾಯ ಆರೋಗ್ಯ ವಿಭಾಗದ ತಂಡ ರಚಿಸಿರುವ ಆರೋಗ್ಯ ಜಾಗೃತಿ ಮತ್ತು ಅರಿವು ಮೂಡಿಸುವ ಶಿಲ್ಪವನ್ನು ಅನಾವರಣ ಗೊಳಿಸಿ ಅವರು ಮಾತನಾಡುತಿದ್ದರು.
ಪ್ರತಿ ವರ್ಷ ಎ.7ನ್ನು ವಿಶ್ವ ಆರೋಗ್ಯ ದಿನವನ್ನಾಗಿ ವಿಶ್ವದ್ಯಾಂತ ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಉತ್ತಮ ಆರೋಗ್ಯದ ಕುರಿತು ಅರಿವು ಮೂಡಿಸುವುದು ಆಗಿದೆ. ಈ ವರ್ಷದ ಘೋಷವಾಕ್ಯ ‘ಎಲ್ಲರಿಗೂ ಆರೋಗ್ಯ’ ಎಂಬುದಾಗಿದೆ ಇದನ್ನು ಕೇಂದ್ರೀಕರಿ ಸುವುದರ ಜೊತೆಗೆ, ವಿಶ್ವ ಅರೋಗ್ಯ ಸಂಸ್ಥೆಯು ತನ್ನ ೭೫ನೇ ವಾರ್ಷಿಕೋತ್ಸವ ವನ್ನು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ 75 ವರ್ಷಗಳ ವಿಷಯದ ಅಡಿಯಲ್ಲಿ ಆಚರಿಸುತ್ತಿದೆ ಎಂದರು.
ಇದರ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉಚಿತಆರೋಗ್ಯ ತಪಾಸಣಾ ಶಿಬಿರ, ಬೆಳಗಿನಿಂದ ಆರೋಗ್ಯ ಜಾಗೃತಿ ಮೂಡಿಸುವ ಭಾಗವಾಗಿ ವಿವಿಧ ತಂಡಗಳಿಂದ ಬೀದಿ ನಾಟಕವನ್ನು ಏರ್ಪಡಿಸಲಾಗಿತ್ತು. ಅಲ್ಲದೇ ಆಸ್ಪತ್ರೆಯ ಉದ್ಯೋಗಿಗಳಿಗೆ ಆರೋಗ್ಯದ ಕುರಿತು ಘೋಷ ವಾಕ್ಯ ರಚನಾ ಸ್ಪಧೆಯರ್ನ್ನು ಏರ್ಪಡಿಸಲಾಗಿತ್ತು.
ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ.ಶಿರನ್ ಶೆಟ್ಟಿ, ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್, ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಡಾ. ಶುಭ ಸೂರಿಯ ಹಾಗೂ ಇತರರು ಉಪಸ್ಥಿತರಿದ್ದರು.
ಸುಮಾರು 1000ಕ್ಕೂ ಅಧಿಕ ಮಂದಿ ಉಚಿತ ಅರೋಗ್ಯ ತಪಾಸಣೆಯ ಪ್ರಯೋಜನ ಪಡೆದರು.