ಕೆಲ ಮಾಜಿ ಸುಪ್ರೀಂ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗ್ ಭಾಗವಾಗಿದ್ದಾರೆಯೇ?: ಕೇಂದ್ರ ಸಚಿವ ಉತ್ತರಿಸಿದ್ದು ಹೀಗೆ...
ಹೊಸದಿಲ್ಲಿ, ಎ. 7: ಕಾನೂನು ಸಚಿವರ ಪ್ರಕಾರ, ‘‘ಸುಪ್ರೀಂ ಕೋರ್ಟ್‌ನ ಕೆಲವು ಮಾಜಿ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗ್‌ನಲ್ಲಿದ್ದಾರೆ’’ಯೇ ಎಂಬ ಇಬ್ಬರು ರಾಜ್ಯಸಭಾ ಸದಸ್ಯರ ಪ್ರಶ್ನೆಗೆ, ಹಾಗೇನೂ ಇಲ್ಲ ಎಂಬುದಾಗಿ ಕಾನೂನು ಸಚಿವ ಕಿರಣ್ ರಿಜಿಜು ಉತ್ತರಿಸಿದ್ದಾರೆ.
‘‘ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರಿಗೆ ಸಂಬಂಧಿಸಿ ಸಚಿವಾಲಯಕ್ಕೆ ಬಂದಿರುವ ದೂರುಗಳು ಉನ್ನತ ನ್ಯಾಯಾಂಗದ ಹಾಲಿ ಸದಸ್ಯರ ನೇಮಕಾತಿ ಮತ್ತು ಸೇವಾ ಸ್ಥಿತಿಗತಿಗಳಿಗೆ ಮಾತ್ರ ಸಂಬಂಧಿಸಿವೆ’’ ಎಂದಷ್ಟೇ ಸಚಿವರು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಜಾವೇದ್ ಅಲಿ ಖಾನ್ ಮತ್ತು ಸಂಯುಕ್ತ ಜನತಾ ದಳದ ರಾಮನಾಥ ಠಾಕೂರ್ ಅವರ ಪ್ರಶ್ನೆಗೆ ರಿಜಿಜು ಈ ರೀತಿಯಾಗಿ ಉತ್ತರಿಸಿದ್ದಾರೆ.
ಈ ಮಾಹಿತಿಯ ಮೂಲವನ್ನು ಬಹಿರಂಗಪಡಿಸುವಂತೆ ಅವರು ಸಚಿವರನ್ನು ಕೋರಿದ್ದಾರೆ ಹಾಗೂ ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾದುದರಿಂದ, ಇದನ್ನು ಭಾರತದ ಮುಖ್ಯ ನ್ಯಾಯಾಧೀಶರು ಮತ್ತು ಕೇಂದ್ರ ಗೃಹ ಸಚಿವಾಲಯದ ಗಮನಕ್ಕೆ ತರಲಾಗಿದೆಯೇ ಎಂಬುದಾಗಿಯೂ ಅವರು ಪ್ರಶ್ನಿಸಿದ್ದಾರೆ.
ಕೆಲವು ನಿವೃತ್ತ ನ್ಯಾಯಾಧೀಶರು, ನರೇಂದ್ರ ಮೋದಿ ಸರಕಾರದ ವಿರುದ್ಧ ದಾಳಿ ನಡೆಸುತ್ತಿರುವ ‘‘ಭಾರತ ವಿರೋಧಿ ಗ್ಯಾಂಗ್’’ನ ಸದಸ್ಯರಾಗಿದ್ದಾರೆ ಎಂದು ಟೆಲಿವಿಶನ್ ಸಂದರ್ಶನವೊಂದರಲ್ಲಿ ರಿಜಿಜು ಹೇಳಿದ್ದರು.
ಇಂಗ್ಲಿಷ್ ಭಾಷೆಯಲ್ಲಿರುವ ಉತ್ತರದಲ್ಲಿ, ಸಚಿವರು ‘ಎ’ಯಿಂದ ‘ಡಿ’ವರೆಗಿನ ಉಪಪ್ರಶ್ನೆಗಳಿಗೆ ನೇರ ಉತ್ತರವನ್ನು ನೀಡಿಲ್ಲ. ಆದರೆ ಹಿಂದಿ ಭಾಷೆಯ ಉತ್ತರದಲ್ಲಿ ಈ ಉಪ ಪ್ರಶ್ನೆಗಳಿಗೆ ‘‘ಜೀ ನಹೀಂ’’ (ಇಲ್ಲ) ಎಂಬುದಾಗಿ ಉತ್ತರಿಸಿದ್ದಾರೆ.