ಅಗ್ನಿವೀರರು ಅರೆಮಿಲಿಟರಿ ಪಡೆಗಳಿಗೆ ಸೇರಲು ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು: ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆ
ಹೊಸದಿಲ್ಲಿ,ಎ.7: ಅಗ್ನಿವೀರರನ್ನು ಅರೆಮಿಲಿಟರಿ ಪಡೆಗಳು ಅಥವಾ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF)ಗಳಲ್ಲಿ ಭರ್ತಿ ಮಾಡಿಕೊಳ್ಳುವ ಮುನ್ನ ಅವರು ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಿದೆ. ಗುರುವಾರ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯು ಕಾನ್‌ಸ್ಟೇಬಲ್‌ಗಳ ನೇಮಕಾತಿಗಾಗಿ ತಿದ್ದುಪಡಿಗೊಳಿಸಿದ ನಿಯಮಗಳನ್ನು ಅಧಿಸೂಚಿಸಿದ್ದು ಈ ವಿಷಯವನ್ನು ಮೊದಲ ಬಾರಿಗೆ ಸ್ಪಷ್ಟಪಡಿಸಲಾಗಿದೆ. ಅಗ್ನಿವೀರರಿಗೆ ಸಶಸ್ತ್ರ ಪಡೆಗಳಿಂದ ನಿವೃತ್ತಿಯ ಬಳಿಕ ಸಿಎಪಿಎಫ್‌ಗಳಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಒದಗಿಸುವುದಾಗಿ ಸರಕಾರವು ಭರವಸೆಯನ್ನು ನೀಡಿತ್ತು.
2010ರ ಅಧಿಸೂಚನೆಯ ಬದಲಾಗಿ ಈ ನಿಯಮಗಳನ್ನು ತರಲಾಗಿದೆ. ಗೃಹ ಸಚಿವಾಲಯವು ಮೊದಲೇ ಘೋಷಿಸಿದಂತೆ ಹೊಸ ಅಧಿಸೂಚನೆಯ ಪ್ರಕಾರ ಅಗ್ನಿವೀರರು ದೈಹಿಕ ಕ್ಷಮತೆ ಪರೀಕ್ಷೆಯಿಂದ ವಿನಾಯಿತಿಯನ್ನು ಮತ್ತು ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯನ್ನು ಪಡೆಯಲಿದ್ದಾರೆ. ಮೊದಲ ತಂಡದ ಅಗ್ನಿವೀರರು ಐದು ವರ್ಷಗಳ ಸಡಿಲಿಕೆಯನ್ನು ಪಡೆಯಲಿದ್ದಾರೆ.
ಈ ನಿಯಮಗಳು ಹಾಲಿ ಅಸ್ತಿತ್ವದಲ್ಲಿರುವ ಇತರ ವರ್ಗಗಳ (ಎಸ್‌ಸಿ/ಎಸ್‌ಟಿಗಳು,ಒಬಿಸಿಗಳು,ಮಾಜಿ ಯೋಧರು ಇತ್ಯಾದಿ) ಮೀಸಲಾತಿಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಶಸ್ತ್ರ ಪಡೆಗಳು ಜಾತಿಯಾಧಾರಿತ ನೇಮಕಾತಿಗಳನ್ನು ಮಾಡಿಕೊಳ್ಳುವುದಿಲ್ಲ,ಆದರೆ ಸಿಎಪಿಎಫ್‌ಗಳಲ್ಲಿ ಅಸ್ತಿತ್ವದಲ್ಲಿರುವ ಮೀಸಲಾತಿ ವ್ಯವಸ್ಥೆಗೆ ಅನುಗುಣವಾಗಿ ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತದೆ ಮತ್ತು ಅದು ಸರ್ವೋಚ್ಚ ನ್ಯಾಯಾಲಯವು ನಿಗದಿಗೊಳಿಸಿರುವ ಶೇ.50ರ ಮಿತಿಯನ್ನು ಮೀರುವಂತಿಲ್ಲ.
ನೇರ ನೇಮಕಾತಿಗಳಿಗಾಗಿ 18ರಿಂದ 23 ವರ್ಷ ವಯೋಮಿತಿಯಾಗಿರುತ್ತದೆ. ಎಸ್‌ಸಿ/ಎಸ್‌ಟಿಗಳಿಗೆ ಐದು ವರ್ಷಗಳ ಮತ್ತು ಒಬಿಸಿಗಳಿಗೆ ಮೂರು ವರ್ಷಗಳ ಸಡಿಲಿಕೆಯಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ದೈಹಿಕ ಮತ್ತು ವೈದ್ಯಕೀಯ ಮಾನದಂಡ
ಅಧಿಸೂಚನೆಯ ಪ್ರಕಾರ ಮಾಜಿ ಅಗ್ನಿವೀರರು ಸೇರಿದಂತೆ ಎಲ್ಲ ಅಭ್ಯರ್ಥಿಗಳು ಮ್ಯಾಟ್ರಿಕ್ಯುಲೇಷನ್‌ನ ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿರುವುದು ಅಗತ್ಯವಾಗಿದೆ ಹಾಗೂ ಕೇಂದ್ರ ಸರಕಾರವು ಕಾಲಕಾಲಕ್ಕೆ ಸೂಚಿಸುವ ಯೋಜನೆಯಂತೆ ದೈಹಿಕ ಮತ್ತು ವೈದ್ಯಕೀಯ ಮಾನದಂಡಗಳು ಅನ್ವಯಿಸುತ್ತವೆ. ಮಾಜಿ ಅಗ್ನಿವೀರರು ದೈಹಿಕ ಕ್ಷಮತೆ ಪರೀಕ್ಷೆಯಿಂದ ವಿನಾಯತಿಯನ್ನು ಹೊಂದಿರುತ್ತಾರೆ. ಆದರೆ ಇತರ ಯಾವುದೇ ಅಗತ್ಯದಿಂದ ವಿನಾಯತಿಯನ್ನು ಅದು ನಿರ್ದಿಷ್ಟ ಪಡಿಸಿಲ್ಲ.
ಈವರೆಗೆ ಸಿಐಎಸ್‌ಎಫ್, ಎಸ್‌ಎಸ್‌ಬಿ, ಐಟಿಬಿಪಿ ಮತ್ತು ಬಿಎಸ್‌ಎಫ್ ಕಾನ್‌ಸ್ಟೇಬಲ್ ಹುದ್ದೆಗಳಿಗಾಗಿ ನೇಮಕಾತಿ ನಿಯಮಗಳನ್ನು ಅಧಿಸೂಚಿಸಿದ್ದು ಅಗ್ನಿವೀರರಿಗೆ ಮೀಸಲಾತಿಯನ್ನು ಉಲ್ಲೇಖಿಸಿವೆ,ಆದರೆ ವಿವರಗಳನ್ನು ನಿರ್ದಿಷ್ಟಗೊಳಿಸಿಲ್ಲ. ಸಿಆರ್‌ಪಿಎಫ್ ನಿಯಮಗಳು ವಿವರಗಳನ್ನು ಒದಗಿಸಿವೆ ಮತ್ತು ಇತರ ಎಲ್ಲ ಸಿಎಪಿಎಫ್‌ಗಳಿಗೆ ಮಾದರಿಯಾಗುವ ಸಾಧ್ಯತೆಯಿದೆ.