ಸಿಲಿಂಡರ್ ಸ್ಫೋಟದಿಂದ ಹೊತ್ತಿ ಉರಿದ ನಾಲ್ಕಂತಸ್ತಿನ ಕಟ್ಟಡ: ನಾಲ್ವರು ಮಕ್ಕಳ ಸಜೀವ ದಹನ
ಡೆಹಾಡೂನ್,ಎ.7: ಇಲ್ಲಿಗೆ 155 ಕಿ.ಮೀ.ಅಂತರದ ವಿಕಾಸ ನಗರದ ತುನಿ ಸೇತುವೆ ಸಮೀಪ ಗುರುವಾರ ಸಂಜೆ ಸಿಲಿಂಡರ್ ಸ್ಫೋಟದಿಂದಾಗಿ ನಾಲ್ಕಂತಸ್ತುಗಳ ಮನೆಯೊಂದು ಹೊತ್ತಿ ಉರಿದಿದ್ದು,ನಾಲ್ವರು ಮಕ್ಕಳು ಸಜೀವ ದಹನಗೊಂಡಿದ್ದಾರೆ.
ಬೆಂಕಿಯಿಂದಾಗಿ ಮನೆಯಲ್ಲಿದ್ದ ಇತರ ಸಿಲಿಂಡರ್‌ಗಳೂ ಸ್ಫೋಟಗೊಂಡು ಇಡೀ ಕಟ್ಟಡವೇ ಸುಟ್ಟು ಕರಕಲಾಗಿದೆ.
ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಸುರತ್ ರಾಮ ಜೋಶಿಯವರ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಮನೆ ಮಾಲಿಕನೊಂದಿಗೆ ಇತರ ಐದು ಕುಟುಂಬಗಳು ಈ ಕಟ್ಟಡದಲ್ಲಿ ಬಾಡಿಗೆಗೆ ವಾಸವಿದ್ದವು. ದುರಂತ ಸಂಭವಿಸಿದಾಗ ಬಾಡಿಗೆದಾರರ ಐವರು ಮಕ್ಕಳು,ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಸಮುಚ್ಚಯದಲ್ಲಿದ್ದರು.
ಬಾಡಿಗೆದಾರರ ಪೈಕಿ ವಿಕಿ ಎನ್ನುವವರ ಪತ್ನಿ ಕುಸುಮ್ ಅಡಿಗೆ ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಬದಲಿಸುತ್ತಿದ್ದಾಗ ಏಕಾಏಕಿ ಅದಕ್ಕೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿಯನ್ನು ನಂದಿಸಲು ಆಕೆ ಪ್ರಯತ್ನಿಸಿದ್ದರಾದರೂ ಅದಾಗಲೇ ಬೆಂಕಿ ಕಟ್ಟಡವನ್ನು ಆವರಿಸಿಕೊಳ್ಳತೊಡಗಿತ್ತು.
ಇತರ ಕುಟುಂಬಗಳ ಸದಸ್ಯರು ಬೊಬ್ಬೆ ಹೊಡೆದಾಗ ಸಮೀಪದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದರು. ಮಾಹಿತಿ ತಿಳಿದು ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯ ತಂಡಗಳು ಸ್ಥಳವನ್ನು ತಲುಪಿದ್ದವು
ಅಗ್ನಿಶಾಮಕ ದಳದ ವಾಹನದಲ್ಲಿ ಕಡಿಮೆ ನೀರಿದ್ದರಿಂದ ಕೇವಲ 10 ನಿಮಿಷಗಳಲ್ಲಿ ಅದು ಖಾಲಿಯಾಗಿತ್ತು. ಅದು ನೀರು ತುಂಬಿಸಿಕೊಂಡು ವಾಪಸ್ ಬರುವಷ್ಟರಲ್ಲಿ ಬೆಂಕಿ ಇಡೀ ಕಟ್ಟಡವನ್ನು ಆವರಿಸಿತ್ತು. ಉತ್ತರಕಾಶಿ ಜಿಲ್ಲಾಧಿಕಾರಿಗಳು ಮೋರಿಯಿಂದ ಅಗ್ನಿಶಾಮಕ ಯಂತ್ರವನ್ನು ರವಾನಿಸಿದ್ದರಾದರೂ ಆ ವೇಳೆಗಾಗಲೇ ತುಂಬ ವಿಳಂಬವಾಗಿತ್ತು.
ಮನೆಯೊಳಗಿದ್ದ ಗುಂಜನ್ (10), ರಿದ್ಧಿ (10), ಆದಿರಾ ಅಲಿಯಾಸ್ ಮಿಷ್ಟಿ (6) ಮತ್ತು ಸೇಜಲ್ (3) ಎಂಬ ಬಾಲಕಿಯರು ಸಜೀವ ದಹನಗೊಂಡಿದ್ದಾರೆ. ವಿಕಿ ಚೌಹಾಣ, ಭಗತ್, ಕುಸುಮ್ ಮತ್ತು ಸ್ವಾತಿ (15) ಗಾಯಗೊಂಡಿದ್ದಾರೆ. ಈ ಪೈಕಿ ಕುಸುಮ್ ಸ್ಥಿತಿ ಗಂಭೀರವಾಗಿದೆ.
ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿಯವರು ದುರಂತದ ಕುರಿತು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ.