ಉಡುಪಿ: ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು
Update: 2023-04-07 21:41 IST
ಉಡುಪಿ, ಎ.7: ಆಂಧ್ರಪ್ರದೇಶದ ಹೈದರಾಬಾದ್‌ನಿಂದ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ಗಂಡನೊಂದಿಗೆ ಬಂದ ತಾಡುರಿ ಪದ್ಮಜಾ ಎಂಬವರ ಎಂಟೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಉಡುಪಿ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆಂದು ತೆರಳಿದ್ದಾಗ ಕಳವಾಗಿದೆ.
ಎ.5ರಂದು ಗಂಡ ತಾಡುರಿ ಶ್ರೀರಾಮುಲು ಅವರೊಂದಿಗೆ ಉಡುಪಿಗೆ ಬಂದು ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ತಂಗಿ ಇಂದು ಬೆಳಗ್ಗೆ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ತೆರಳಿದ್ದಾಗ ಬೆಳಗ್ಗೆ 5:00ರಿಂದ 6:21ರ ಮಧ್ಯೆ ಯಾರೋ ಕಳ್ಳರು ಅವರ ಹ್ಯಾಂಡ್‌ಬ್ಯಾಗ್‌ನಲ್ಲಿ ಸಣ್ಣ ಫೌಚ್‌ನಲ್ಲಿ ಇಟ್ಟಿದ್ದ 6 ಚಿನ್ನದ ಬಳೆ ಹಾಗೂ ಒಂದು ಉದ್ದದ ಹವಳ ಮತ್ತು ಚಿನ್ನದ ಸರವನ್ನು ಪೌಚ್ ಸಮೇತ ಕಳವು ಮಾಡಿರುವುದಾಗಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳವಾದ ಚಿನ್ನಾಭರಣಗಳ ಒಟ್ಟು ತೂಕ 142 ಗ್ರಾಂ ಆಗಿದ್ದು, ಮೌಲ್ಯ 8.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.