ರಾಹುಲ್ ಗಾಂಧಿ ಕಚೇರಿಯ ದೂರವಾಣಿ ಸಂಪರ್ಕವನ್ನು ಕಡಿತಗೊಳಿಸಿದ BSNL
ತಿರುವನಂತಪುರಂ: ಕಾಂಗ್ರೆಸ್ (Congress) ನಾಯಕ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ (Rahul Gandhi) ಕಚೇರಿಯ ದೂರವಾಣಿ ಹಾಗೂ ಅಂರ್ಜಾಲ ಸಂಪರ್ಕವನ್ನು ಬಿಎಸ್‌ಎನ್‌ಎಲ್ (BSNL) ಕಡಿತಗೊಳಿಸಿದೆ ಎಂದು thehindu.com ವರದಿ ಮಾಡಿದೆ.
ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ಅವರಿಗೆ ದಿಲ್ಲಿಯಲ್ಲಿನ ಅಧಿಕೃತ ನಿವಾಸವನ್ನು ತೆರವುಗೊಳಿಸುವಂತೆ ಈ ಮುನ್ನ ಸೂಚಿಸಲಾಗಿತ್ತು. ಇದರ ಬೆನ್ನಿಗೇ ಗುರುವಾರ ಅವರ ಕಚೇರಿಯ ಅಂತರ್ಜಾಲ ಸೇವೆ ಹೊಂದಿದ್ದ ದೂರವಾಣಿ ಸಂಖ್ಯೆ 04936-209988 ಸಂಪರ್ಕವನ್ನು ರದ್ದುಗೊಳಿಸಲಾಗಿದೆ.
ಮಾನಹಾನಿ ಪ್ರಕರಣವೊಂದರಲ್ಲಿ ಗುಜರಾತ್‌ನ ಸ್ಥಳೀಯ ನ್ಯಾಯಾಲಯವೊಂದು ರಾಹುಲ್ ಗಾಂಧಿಯನ್ನು ದೋಷಿಯೆಂದು ಘೋಷಿಸಿ, ಎರಡು ವರ್ಷಗಳ ಕಾಲ ಸೆರೆವಾಸ ಶಿಕ್ಷೆ ವಿಧಿಸಿತ್ತು. ನಂತರ ಮಾರ್ಚ್ 24ರಂದು ಲೊಕಸಭಾ ಕಾರ್ಯಾಲಯವು ನ್ಯಾಯಾಲಯದ ಆದೇಶವನ್ನು ಆಧರಿಸಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿತ್ತು.
ಆದರೆ, ಸೂರತ್ ನ್ಯಾಯಾಲಯದಿಂದ ರಾಹುಲ್ ಗಾಂಧಿಗೆ ಜಾಮೀನು ದೊರೆತಿದ್ದು, ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಯಲಿದ್ದರೂ ಇಂತಹ ತರಾತುರಿಯ ನಿರ್ಧಾರ ತೆಗೆದುಕೊಂಡಿರುವುದು ಅನಿರೀಕ್ಷಿತ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಕ್ರಿಯಿಸಿದೆ.