×
Ad

ತಾವೇ ಗೋಹತ್ಯೆಗೈದು ಮುಸ್ಲಿಮರ ತಲೆಗೆ ಕಟ್ಟಲು ಪ್ರಯತ್ನಿಸಿದ್ದ ಹಿಂದೂ ಮಹಾಸಭಾದ ಕಾರ್ಯಕರ್ತರ ಬಂಧನ: ವರದಿ

ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಸಂಜಯ್‌ ಜಾಟ್‌ ಪ್ರಕರಣದ ಸಂಚುಕೋರ

Update: 2023-04-08 14:33 IST

ಹೊಸದಿಲ್ಲಿ: ತಾವು ದ್ವೇಷ ಹೊಂದಿದ್ದ ಕೆಲ ಮುಸ್ಲಿಂ ವ್ಯಕ್ತಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವಂತಾಗಲು ತಾವೇ ದನಗಳನ್ನು ಹತ್ಯೆಗೈದ ಅಖಿಲ ಭಾರತ ಹಿಂದು ಮಹಾಸಭಾದ (All India Hindu Mahasabha) ನಾಲ್ಕು ಮಂದಿಯನ್ನು ಆಗ್ರಾದಲ್ಲಿ ಬಂಧಿಸಲಾಗಿದೆ ಎಂದು thewire.in ವರದಿ ಮಾಡಿದೆ.

ಗೋವುಗಳ ಹತ್ಯೆ ಆಗ್ರಾದ ಇತಿಮದ್‌ ಉದ್‌ ದೌಲಾಹ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಗೌತಮ್‌ ಬುಧ್‌ ನಗರದಲ್ಲಿ ಮಾರ್ಚ್‌ 29 ರಂದು ರಂದು ರಾಮನವಮಿಯ ಮುನ್ನಾದಿನ ನಡೆದಿತ್ತು ಎಂದು ವರದಿಯಾಗಿದೆ.

ಆ ದಿನ  ಆ ಸ್ಥಳಕ್ಕೆ ಆಗಮಿಸಿದ್ದ ಮಹಾಸಭಾದ ಸದಸ್ಯರು ತಮಗೆ ಗೋಮಾಂಸ ದೊರಕಿದೆ ಎಂದು ಹೇಳಿಕೊಂಡಿದ್ದರಲ್ಲದೆ ಜಿತೇಂದ್ರ ಕುಶ್ವಾಹ ಎಂಬಾತ ದಾಖಲಿಸಿದ್ದ ಪೊಲೀಸ್‌ ದೂರಿನ ಅನುಸಾರ ಸ್ಥಳೀಯರಾದ ಮುಹಮ್ಮದ್‌ ರಿಝ್ವಾನ್‌, ಮುಹಮ್ಮದ್‌ ನಕೀಂ ಮತ್ತು ಮುಹಮ್ಮದ್‌ ಶಾನು ಎಂಬವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಹಿಂದುತ್ವ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆಯನ್ನೂ ಹಾಕಿದ್ದರು.

ಆದರೆ ಬಂಧಿತರ ವಿಚಾರಣೆ ನಡೆಸಿದ ಪೊಲೀಸರಿಗೆ ಅವರಿಗೂ ಗೋಹತ್ಯೆಗೂ ಸಂಬಂಧವಿಲ್ಲ, ಹಾಗೂ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಸಂಜಯ್‌ ಜಾಟ್‌ ಎಂಬಾತ ಪ್ರಮುಖ ಸಂಚುಕೋರ ಎಂದು ತಿಳಿದು ಬಂದಿತ್ತು.

ಶಾನು, ಇಮ್ರಾನ್‌ ಮತ್ತು ಇತರರಿಗೆ ಸಹೋದರರಾದ ನಕೀಂ, ಬಿಜ್ಜೊ ಮತ್ತು ರಿಝ್ವಾನ್‌ ಜೊತೆ ವಿವಾದವಿತ್ತು. ನಕೀಂ ಮುನಿಸಿಪಲ್‌ ಉದ್ಯೋಗಿಯಾಗಿದ್ದ. ಆತನ ಬಗ್ಗೆ ದ್ವೇಷ ಹೊಂದಿದ್ದ ಶಾನು ಮತ್ತು ಇಮ್ರಾನ್‌ ತಮ್ಮ ಕಾರ್ಯಸಾಧನೆಗಾಗಿ ದೂರುದಾರ ಕುಶ್ವಾಹ, ಸಂಜಯ್‌ ಜಾಟ್‌ ಜೊತೆಗೂಡಿ ಈ ಆರೋಪ ಹೊರಿಸಿದ್ದರು.

ಜಿತೇಂದ್ರ ಸುಳ್ಳು ಹೇಳಿದ್ದನೆಂದು ಪೊಲೀಸರಿಗೆ  ವಿಚಾರಣೆಯಿಂದ ತಿಳಿದು ಬಂತಲ್ಲದೆ ಕರೆ ಮಾಹಿತಿ ವಿವರಗಳಂತೆ ಆತ, ಸಂಜಯ್‌ ಮತ್ತಿತರರು ಗೋವುಗಳ ಹತ್ಯೆ ನಡೆದ ಸ್ಥಳದಲ್ಲಿದ್ದರೆಂಬ ಮಾಹಿತಿ ದೊರಕಿತ್ತು, ಆದರೆ ಆರೋಪಿಗಳೆಂದು ಬಂಧಿತರಾದವರು ಅಲ್ಲಿರಲಿಲ್ಲ ಹಾಗೂ ಆ ಜಾಗಕ್ಕೆ ಒಂದು ತಿಂಗಳಿಂದೀಚೆಗೆ ಹೋಗಿಲ್ಲ ಎಂದು ತಿಳಿದು ಬಂದಿತ್ತು ಎಂದು thewire.in ವರದಿ ಮಾಡಿದೆ.

Similar News