×
Ad

ಗೃಹ ಸಚಿವ ಶಾ ಕುರಿತ ಪೋಸ್ಟ್ ಅನ್ನು ವಿಶ್ವಾದ್ಯಂತ ತೆಗೆದುಹಾಕಿದ ಟ್ವಿಟರ್

Update: 2023-04-08 20:53 IST

ಹೊಸದಿಲ್ಲಿ,ಎ.8: ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಇದೇ ಮೊದಲ ಬಾರಿಗೆ ಸ್ಪಷ್ಟ ಕ್ರಮವೊಂದರಲ್ಲಿ ಭಾರತದ ‘ಕಾನೂನು ಬೇಡಿಕೆ ’ಗೆ ಪ್ರತಿಕ್ರಿಯೆಯಾಗಿ ಟ್ವೀಟ್ವೊಂದನ್ನು ಜಾಗತಿಕವಾಗಿ ತಡೆಹಿಡಿದಿರುವಂತಿದೆ. ಪತ್ರಕರ್ತ ಹಾಗೂ ಆರ್ ಟಿ ಐ ಕಾರ್ಯಕರ್ತ ಸೌರವ ದಾಸ್ ಅವರು ಹಿಂದಿನ ಎರಡು ಟ್ವೀಟ್ ಗಳ ಸ್ಕ್ರೀನ್ಶಾಟ್ ನ್ನು ಪೋಸ್ಟ್ ಮಾಡಿದ್ದಾರೆ. ಈ ಪೈಕಿ ಒಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಉಲ್ಲೇಖಿಸಿದ್ದು, ವಿಷಯವನ್ನು ವಿಶ್ವಾದ್ಯಂತ ತಡೆಹಿಡಿಯಲಾಗಿದೆ ಎಂಬ ಟ್ವಿಟರ್ ಸಂದೇಶವು ಜೊತೆಯಲ್ಲಿದೆ.

ಸಾಮಾನ್ಯವಾಗಿ ಟ್ವಿಟರ್ ಸರಕಾರದ ಮನವಿಗಳ ಮೇರೆಗೆ ನಿರ್ಬಂಧವನ್ನು ಕೋರಲಾಗಿರುವ ಪ್ರದೇಶದಲ್ಲಿ ಮಾತ್ರ ಪೋಸ್ಟ್ಗಳಿಗೆ ಪ್ರವೇಶವನ್ನು ತಡೆಹಿಡಿಯುವುದರಿಂದ ಈ ಬೆಳವಣಿಗೆಯು ಮಹತ್ವ ಪಡೆದುಕೊಂಡಿದೆ. ಯಾವುದೇ ಪೋಸ್ಟ್ ಟ್ವಿಟರ್ ನ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದರೆ ಮಾತ್ರ ಅದನ್ನು ಜಾಗತಿಕವಾಗಿ ತೆಗೆದುಹಾಕಲಾಗುತ್ತದೆ.

ಈ ಕುರಿತು ಸುದ್ದಿಸಂಸ್ಥೆಯ ಪ್ರಶ್ನೆಗೆ ಭಾರತದಲ್ಲಿ ಟ್ವಿಟರ್ ಮುಖ್ಯಸ್ಥೆ ಕನಿಕಾ ಮಿತ್ತಲ್ ಮತ್ತು ಅದರ ಜಾಗತಿಕ ಸರಕಾರಿ ವ್ಯವಹಾರಗಳ ನಿರ್ದೇಶಕ ಸಮೀರನ್ ಗುಪ್ತಾ ಅವರು ತಕ್ಷಣಕ್ಕೆ ಉತ್ತರಿಸಿಲ್ಲ.

ಟ್ವೀಟ್ ನ ನಿಖರವಾದ ಸಂದರ್ಭ ತನಗೆ ನೆನಪಿಲ್ಲ ಎಂದು ದಾಸ್ ಹೇಳಿದ್ದಾರೆ. ಈ ಪೋಸ್ಟ್ ಗಳನ್ನು ತೆಗೆದುಹಾಕುವಂತೆ ಯಾವ ಸರಕಾರಿ ಏಜೆನ್ಸಿ ಟ್ವಟರ್ ಅನ್ನು ಆಗ್ರಹಿಸಿತ್ತು ಎನ್ನುವುದು ಸ್ಪಷ್ಟವಾಗಿಲ್ಲ. ಸದ್ಯ ಈ ಪೋಸ್ಟ್ ಗಳು ಹುಡುಕಾಟದಲ್ಲಿ ಲಭ್ಯವಾಗುತ್ತಿಲ್ಲ.

Similar News