ಮುಂದಿನ ವಾರ ದಿಲ್ಲಿಗೆ ಭೇಟಿ ನೀಡಲಿರುವ ಉಕ್ರೇನ್ ಸಚಿವೆ
ಹೊಸದಿಲ್ಲಿ,ಎ.8: ಉಕ್ರೇನಿನ ಪ್ರಥಮ ಉಪ ವಿದೇಶಾಂಗ ಸಚಿವೆ ಎಮಿನೆ ಝಪರೋವಾ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಿ ಸರಕಾರದೊಂದಿಗೆ ಮಾತುಕತೆಗಳನ್ನು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೀವ್ಗೆ ಆಹ್ವಾನಿಸುವ ಸಾಧ್ಯತೆಯಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ರಶ್ಯಾ-ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ ಇದು ಮಾತುಕತೆಗಳಿಗಾಗಿ ಭಾರತಕ್ಕೆ ಉಕ್ರೇನಿನ ಸಚಿವರೋರ್ವರ ಮೊದಲ ಭೇಟಿಯಾಗಿದೆ.
ಝಪರೋವಾ ಅವರು ಸೋಮವಾರ ದಿಲ್ಲಿಯನ್ನು ತಲುಪುವ ನಿರೀಕ್ಷೆಯಿದೆ ಎನ್ನುವುದನ್ನು ದೃಢಪಡಿಸಿದ ರಾಜತಾಂತ್ರಿಕ ಮೂಲಗಳು,ಅವರು ಅಂತರಸಚಿವಾಲಯ ಮಾತುಕತೆಗಳನ್ನು ನಡೆಸಲಿದ್ದಾರೆ ಮತ್ತು ಭಾರತದಲ್ಲಿ ಉಕ್ರೇನ್ ಗೆ ಬೆಂಬಲವನ್ನು ಕ್ರೋಢೀಕರಿಸುವ ದೃಷ್ಟಿಯಿಂದ ಮಾಧ್ಯಮಗಳು ಮತ್ತು ಚಿಂತನ ಚಾವಡಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದವು.
ಔಷಧಿಗಳು,ವೈದ್ಯಕೀಯ ಉಪಕರಣಗಳು,ವಿದ್ಯುತ್ ಉಪಕರಣಗಳು ಮತ್ತು ಯುದ್ಧದ ಸಮಯದಲ್ಲಿ ಹಾನಿಗೀಡಾಗಿರುವ ವಿದ್ಯುತ್ ಮೂಲಸೌಕರ್ಯಗಳ ದುರಸ್ತಿ ಸೇರಿದಂತೆ ಹೆಚ್ಚಿನ ಮಾನವೀಯ ನೆರವಿಗಾಗಿ ಉಕ್ರೇನ್ ಭಾರತವನ್ನು ಕೋರಿಕೊಂಡಿದ್ದು,ಇಂತಹ ನೆರವಿನ ಪೂರೈಕೆ ಬಗ್ಗೆ ಉಭಯ ದೇಶಗಳು ಚರ್ಚಿಸುವ ನಿರೀಕ್ಷೆಯಿದೆ.
ಮಾತುಕತೆಗಳ ಸಂದರ್ಭದಲ್ಲಿ ಝಪರೋವಾ ಅವರು ತನ್ನ ದೇಶದ ಪರವಾಗಿ ಒಮ್ಮತವನ್ನು ರೂಪಿಸಲು ಕೈಜೋಡಿಸುವಂತೆ ಭಾರತಕ್ಕೆ ಕರೆನೀಡುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ‘10 ಅಂಶಗಳ ಶಾಂತಿ ಸೂತ್ರ’ವನ್ನು ಮಂಡಿಸಲಿದ್ದಾರೆ ಎಂದೂ ಮೂಲಗಳು ತಿಳಿಸಿದವು.