ಆ್ಯಕ್ಷನ್ ಅಬ್ಬರದ 'ವೀರಂ'

Update: 2023-04-08 19:30 GMT

ಕನ್ನಡ ಚಿತ್ರರಂಗದಲ್ಲಿ ಬಿಲ್ಡಪ್ ಸಿನೆಮಾಗಳಿಗೇನೂ ಕಡಿಮೆ ಇಲ್ಲ. ಈಗಂತೂ ಬಿಲ್ಡಪ್ ಸೀನ್‌ಗಳನ್ನು ಸ್ವಲ್ಪಹೆಚ್ಚಾಗಿಯೇ ತೋರಿಸಲಾಗುತ್ತಿದೆ. ಅದರಲ್ಲೂ ಮಾಸ್ ಸಿನೆಮಾಗಳು ಎಂದಾಗ ಅಲ್ಲಿ ಹೆಚ್ಚು ಇಂಥವೇ ಸೀನ್ ಇದ್ದೇ ಇರುತ್ತವೆ. ಈ ವಾರ ಬಿಡುಗಡೆಯಾಗಿರುವ 'ವೀರಂ' ಸಿನೆಮಾ ಕೂಡ ಅದಕ್ಕೆ ಹೊರತಾಗಿಲ್ಲ. ಟೈಟಲ್‌ನಲ್ಲೇ ವೀರಾವೇಶ ಇಟ್ಟುಕೊಂಡು ಬಂದಿರುವ ವೀರಂ, ಮಾಸ್ ಎಲಿಮೆಂಟ್ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಹೊತ್ತು ತಂದಿದೆ. ವೀರಂ ಸಿನೆಮಾ ಪ್ರಜ್ವಲ್ ಅಭಿಮಾನಿಗಳಿಗೆ ಇಷ್ಟವಾಗಿದೆ.

ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಪೂರ್ತಿಯಾಗಿ ಮಾಸ್ ಫೀಲ್ ಕೊಡುತ್ತದೆ. ಅಲ್ಲಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಸ್ವಲ್ಪಜಾಸ್ತಿಯೇ ಆಯಿತು ಎಂಬ ಭಾವನೆ ಪ್ರೇಕ್ಷಕರನ್ನು ಕಾಡದೆ ಇರುವುದಿಲ್ಲ. ಹಾಗೆಂದು ಬರೀ ಆ್ಯಕ್ಷನ್ ಸೀನ್‌ಗಳೇ ಇಲ್ಲ. ಹೊಡಿ ಬಡಿ ಕಥೆಯನ್ನಿಟ್ಟುಕೊಂಡು, ಅದಕ್ಕೊಂದು ಚೆಂದದ ಫ್ಯಾಮಿಲಿ ಸೆಂಟಿಮೆಂಟ್ ಕೊಟ್ಟು ಸಿನೆಮಾ ಮಾಡಿದ್ದಾರೆ ನಿರ್ದೇಶಕ ಕುಮಾರ್. ಸೆಂಟಿಮೆಂಟ್ ಇಲ್ಲಿ ಚೆನ್ನಾಗಿಯೇ ವರ್ಕೌಟ್ ಆಗಿದೆ. ಆ್ಯಕ್ಷನ್, ಸೆಂಟಿಮೆಂಟ್ ಎಲ್ಲಾ ಸೇರಿ ವೀರಂ ಗಮನ ಸೆಳೆಯುತ್ತದೆ.

ಚಿತ್ರದ ನಾಯಕ ವೀರು (ಪ್ರಜ್ವಲ್ ದೇವರಾಜ್) ಮತ್ತು ನರಸಿಂಹ (ಶ್ರೀನಗರ ಕಿಟ್ಟಿ) ಅಣ್ಣ ತಮ್ಮಂದಿರು. ಅಕ್ಕನ ಆಶ್ರಯದಲ್ಲಿ ಪ್ರೀತಿಯಿಂದ ಬೆಳೆದ ಸಹೋದರರು. ಅಕ್ಕ ಸೀತಾ ಪಾತ್ರಕ್ಕೆ ಶೃತಿ ನಿಜಕ್ಕೂ ನ್ಯಾಯ ಒದಗಿಸಿದ್ದಾರೆ. ಭಾವನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಗಮನ ಸೆಳೆಯುತ್ತಾರೆ. ತಂದೆ ತಾಯಿ ಇಲ್ಲದೆ ತಮ್ಮಂದಿರನ್ನು ಸಾಕಿ ಬೆಳೆಸುವ ಅಕ್ಕನಿಗೆ ಇವರೇ ಪ್ರಪಂಚ. ತಮ್ಮಂದಿರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ, ಒಳ್ಳೆಯ ಕೆಲಸಕ್ಕೆ ಸೇರಿ, ಹೆಮ್ಮೆಯಿಂದ ಬದುಕಬೇಕು ಎಂಬುದೇ ಅಕ್ಕನ ಆಸೆ. ಆ ಆಸೆಗೆ ನೀರೆರಚುವುದೇ ಮಾರ್ಕೆಟ್ ಆಧಿಪತ್ಯದ ವಿಷಯ. ದೇವಿ ಹಾಗೂ ಕೂಲಿಂಗ್ ಗ್ಲಾಸ್ ಗೋವಿಂದ ಜಾಗದ ಆಧಿಪತ್ಯಕ್ಕಾಗಿ ಹೋರಾಡುತ್ತಿರುತ್ತಾರೆ. ಈ ಹೊತ್ತಲ್ಲಿಯೇ ನಾಯಕನ ಸಹೋದರ ನರಸಿಂಹ ಗೋವಿಂದನ ಗ್ಯಾಂಗ್ ಸೇರುತ್ತಾನೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಾಯಕ ವೀರು ತನ್ನ ಪಾಡಿಗೆ ತಾನು ಕೆಲಸ ಹುಡುಕುತ್ತಿರುತ್ತಾನೆ. ಇನ್ನೇನು ಕೆಲಸಕ್ಕೆ ಸೇರಬೇಕು ಎನ್ನುವಾಗಲೇ ದೇವಿ ಕೊಲೆಯಾಗುತ್ತದೆ. ಮಾಡದ ತಪ್ಪಿಗೆ ನಾಯಕ ಶಿಕ್ಷೆ ಅನುಭವಿಸಬೇಕಾಗುತ್ತೆ. ಇವೆಲ್ಲದರಿಂದ ಬೇಸತ್ತ ಅಕ್ಕ, ತಮ್ಮಂದಿರಿಂದ ದೂರವಾಗುತ್ತಾರೆ. ಕೊಲೆಯಾದವನ ಕಡೆಯವರ ದ್ವೇಷದ ಜೊತೆ ಅಕ್ಕನ ತಿರಸ್ಕಾರವನ್ನೂ ಎದುರಿಸುವ ನಾಯಕ, ಕೊನೆಗೆ ಹೇಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾನೆ? ಅಕ್ಕನ ಮನೆ ಸೇರುತ್ತಾನೆಯೆ ಅಥವಾ ಬೇರೆ ದಾರಿ ಹಿಡಿಯುತ್ತಾನೆಯೆ ಎನ್ನುವುದೇ ಸಿನೆಮಾದ ಜೀವಾಳ.

ಸೆಂಟಿಮೆಂಟ್ ಕಥೆಗೆ ಮಾಸ್ ಟಚ್ ಕೊಟ್ಟು ಸಿನೆಮಾ ಮಾಡಿರುವ ನಿರ್ದೇಶಕರು, ಅಲ್ಲಲ್ಲಿ ಅತಿ ಅನ್ನಿಸುವಷ್ಟು ಬಿಲ್ಡಪ್ ಕೊಟ್ಟಿದ್ದಾರೆ. ಅದರಲ್ಲೂ ಕೆಲವೊಮ್ಮೆ ಪ್ರೇಕ್ಷಕರ ತಾಳ್ಮೆಯ ಕಟ್ಟೆ ಒಡೆದುಹೋಗುತ್ತದೆ. ವಿಲನ್ ಪಾತ್ರದಲ್ಲಿ ಅಬ್ಬರಿಸಿರುವ ಶಿಷ್ಯ ದೀಪಕ್ ಪಾತ್ರಕ್ಕಂತೂ ಅಗತ್ಯಕ್ಕಿಂತ ಹೆಚ್ಚಾಗಿಯೇ ಮಹತ್ವ ಕೊಟ್ಟು ಬೋರ್ ಹೊಡೆಸುತ್ತಾರೆ ನಿರ್ದೇಶಕರು. ಇವೆಲ್ಲದರ ಮಧ್ಯೆಯೂ ಅಕ್ಕ-ತಮ್ಮಂದಿರ ಬಾಂಧವ್ಯವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಬ್ಬ ಕಲಾವಿದರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಶೃತಿ ಅವರ ಪಾತ್ರವಂತೂ ಪ್ರೇಕ್ಷಕರನ್ನು ಕಾಡುತ್ತದೆ.

ನಾಯಕಿಯಾಗಿ ರಚಿತಾರಾಮ್ ಗಮನ ಸೆಳೆಯುತ್ತಾರೆ. ಆದರೆ ಅವರ ಪಾತ್ರಕ್ಕೆ ಇನ್ನಷ್ಟು ಪ್ರಾಮುಖ್ಯತೆ ನೀಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅನಿಸುವುದಂತೂ ನಿಜ. ಧಾತ್ರಿ ಪಾತ್ರದಲ್ಲಿ ಅಭಿನಯಿಸಿರುವ ರಚಿತಾರಾಮ್‌ಗೆ ಇಲ್ಲಿ ಅಷ್ಟು ಪ್ರಾಮುಖ್ಯತೆಯೇ ಇಲ್ಲ. ನಾಯಕನ ಪಾತ್ರದ ಜೊತೆಗೆ ನಾಯಕನ ಸಹೋದರನಾಗಿ ಬಣ್ಣ ಹಚ್ಚಿರುವ ಶ್ರೀನಗರ ಕಿಟ್ಟಿ ಪಾತ್ರಕ್ಕೆ ಒಳ್ಳೆಯ ಎಂಟ್ರಿ ಇದೆಯಾದರೂ, ಪಾತ್ರ ಬಹಳ ಬೇಗ ತೆರೆಯ ಮೇಲಿಂದ ಕಣ್ಮರೆಯಾಗುತ್ತದೆ. ಇನ್ನುಳಿದಂತೆ ಅನೂಪ್ ಸೀಳಿನ್ ಸಂಗೀತ, ಲವಿತ್ ಛಾಯಾಗ್ರಹಣ ಚಿತ್ರದ ಪ್ಲಸ್ ಪಾಯಿಂಟ್.

ಒಂದು ಮಾಸ್ ಕಥೆಗೆ ಫ್ಯಾಮಿಲಿ ಎಮೋಷನ್ಸ್ ಸೇರಿಸಿ, ಜೊತೆಗೆ ಲವ್, ಕಾಮಿಡಿ ಮಿಕ್ಸ್ ಮಾಡಿ ಸಿನೆಮಾ ಮಾಡಲಾಗಿದೆ. ಬಿಲ್ಡಪ್ ಸಿನೆಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಸಿನೆಮಾ ಇಷ್ಟವಾಗುತ್ತದೆ.


ತಾರಾಗಣ: ಪ್ರಜ್ವಲ್ ದೇವರಾಜ್, ಶ್ರೀನಗರ ಕಿಟ್ಟಿ, ದೀಪಕ್, ರಚಿತಾರಾಮ್, ಶೃತಿ, ಅಚ್ಯುತ್ ಕುಮಾರ್
ನಿರ್ದೇಶನ: ಕುಮಾರ್
ಸಂಗೀತ: ಅನೂಪ್ ಸೀಳಿನ್

Similar News