ರೈಲ್ವೆ ಇಲಾಖೆಯಲ್ಲಿ 3.15 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ: ಸರ್ಕಾರಿ ದತ್ತಾಂಶದಿಂದ ಬಹಿರಂಗ
ಹೊಸದಿಲ್ಲಿ: ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ಭಾರತೀಯ ರೈಲ್ವೆಯ 18 ವಲಯಗಳಲ್ಲಿ ಗೆಝೆಟೆಡ್ ಅಧಿಕಾರಿಗಳು ಹಾಗೂ ಗೆಝೆಟೇತರ ಅಧಿಕಾರಿಗಳ ಒಟ್ಟು 3.15 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ ಎಂದು The New Indian Express ವರದಿ ಮಾಡಿದೆ.
ರೈಲ್ವೆ ಸಚಿವಾಲಯದ ಪ್ರಕಾರ, ಫೆಬ್ರವರಿ 1ಕ್ಕೆ ಅಂತ್ಯಗೊಂಡಂತೆ ಈ ವರ್ಷ ಗೆಝೆಟೆಡ್ ಹಾಗೂ ಗೆಝೆಟೇತರ ವಿಭಾಗದಲ್ಲಿ ಭರ್ತಿಯಾಗದೆ ಖಾಲಿ ಉಳಿದಿರುವ ಹುದ್ದೆಗಳ ಸಂಖ್ಯೆ 21,837ರಷ್ಟು ಏರಿಕೆಯಾಗಿದ್ದು, ಸದ್ಯ ರೈಲ್ವೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಒಟ್ಟು ಸಂಖ್ಯೆ 3,15,780 ಆಗಿದೆ.
ಗೆಝೆಟೇತರ ಹುದ್ದೆಗಳ ಪೈಕಿ ಎಂಜಿನಿಯರ್‌ಗಳು, ತಂತ್ರಜ್ಞರು, ಗುಮಾಸ್ತರು, ನಿಲ್ದಾಣಾಧಿಕಾರಿಗಳು, ಟಿಕೆಟ್ ಕಲೆಕ್ಟರ್‌ಗಳು ಮತ್ತಿತರರು ಸೇರಿದ್ದಾರೆ.
ಭಾರತೀಯ ರೈಲ್ವೆಯ 18 ವಲಯಗಳ ಪೈಕಿ 2,885 ಗೆಝೆಟೆಡ್ ಹುದ್ದೆಗಳು ಹಾಗೂ 3,12,985 ಗೆಝೆಟೇತರ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ ಎಂದು ಅಧಿಕೃತ ಸರ್ಕಾರಿ ದತ್ತಾಂಶವನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ.
ಇದಲ್ಲದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರವರ್ಗದಲ್ಲಿ ಕನಿಷ್ಠ 18,670 ಹುದ್ದೆಗಳು ಖಾಲಿ ಉಳಿದಿವೆ. ಜನವರಿ 1, 2023ಕ್ಕೆ ಅಂತ್ಯಗೊಂಡಂತೆ ಪರಿಶಿಷ್ಟ ಜಾತಿ ಪ್ರವರ್ಗದಲ್ಲಿ 6,112 ಹುದ್ದೆಗಳು ಖಾಲಿಯಿದ್ದರೆ, ಪರಿಶಿಷ್ಟ ಪಂಗಡ ಪ್ರವರ್ಗದಲ್ಲಿ 5,113, ಇತರೆ ಹಿಂದುಳಿದ ವರ್ಗಗಳ ಪ್ರವರ್ಗದಲ್ಲಿ 7,427 ಹುದ್ದೆಗಳು ಖಾಲಿ ಉಳಿದಿವೆ.
ಅತಿ ಹೆಚ್ಚು ಖಾಲಿ ಹುದ್ದೆಗಳು ಉತ್ತರ ರೈಲ್ವೆ ವಲಯದಲ್ಲಿದ್ದು, ಇಲ್ಲಿ 38,754 ಹುದ್ದೆಗಳು ಖಾಲಿ ಇದ್ದರೆ, ನಂತರದ ಸ್ಥಾನದಲ್ಲಿರುವ ಪಶ್ಚಿಮ ರೈಲ್ವೆ ವಲಯ, ಪೂರ್ವ ರೈಲ್ವೆ ವಲಯ ಹಾಗೂ ಕೇಂದ್ರ ರೈಲ್ವೆ ವಲಯಗಳಲ್ಲಿ ಕ್ರಮವಾಗಿ 36,476 ಮತ್ತು 30,141 ಹಾಗೂ 28,650 ಹುದ್ದೆಗಳು ಖಾಲಿ ಉಳಿದಿವೆ. ನಂತರದ ಸ್ಥಾನಗಳಲ್ಲಿ ಇತರೆ ರೈಲ್ವೆ ವಲಯಗಳಿವೆ ಎಂದು ಮೂಲಗಳು The New Indian Express ಸುದ್ದಿ ಸಂಸ್ಥೆಗೆ ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು, ಪ್ರತಿ ವರ್ಷ ಉದ್ಯೋಗಿಗಳು ನಿವೃತ್ತರಾಗುವುದರಿಂದ ರೈಲ್ವೆಯಲ್ಲಿನ ಖಾಲಿ ಹುದ್ದೆಗಳ ಸಂಖ್ಯೆ ಏರುಪೇರಾಗುತ್ತಲೇ ಇರುತ್ತದೆ ಎಂದು ತಿಳಿಸಿದ್ದಾರೆ.
"ದತ್ತಾಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ವಿವಿಧ ಪ್ರವರ್ಗಗಳಿಂದ ಒಟ್ಟು 1,41,886 ಉದ್ಯೋಗಿಗಳು ನಿವೃತ್ತರಾಗಿದ್ದಾರೆ. ವರ್ಷದ ಆಧಾರದಲ್ಲಿ 2019-20ರಲ್ಲಿ 50,051, 2020-21ರಲ್ಲಿ 46,988 ಹಾಗೂ 2021-22ರಲ್ಲಿ 44,847 ಉದ್ಯೋಗಿಗಳು ನಿವೃತ್ತರಾಗಿದ್ದಾರೆ. ರೈಲ್ವೆಯು ಖಾಲಿ ಹುದ್ದೆಗಳಿಗೆ ಭರ್ತಿ ಮಾಡುವ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡುತ್ತಿದೆ" ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.