ತಮಿಳುನಾಡು ರಾಜ್ಯಪಾಲರ ವಿರುದ್ಧ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್

Update: 2023-04-10 12:51 GMT

ಚೆನ್ನೈ: ತಮಿಳುನಾಡಿನಲ್ಲಿ ಸರಕಾರ ಮತ್ತು ರಾಜ್ಯಪಾಲರ ನಡುವೆ ಹಗ್ಗ ಜಗ್ಗಾಟ ಮುಂದುವರಿದೆ. ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿರುವ ಸರಕಾರವು, ಸದನವು ಅಂಗೀಕರಿಸಿರುವ ಮಸೂದೆಗಳಿಗೆ ನಿರ್ದಿಷ್ಟ ಅವಧಿಯೊಳಗೆ ಒಪ್ಪಿಗೆಯನ್ನು ನೀಡುವಂತೆ ತಮಿಳುನಾಡು ರಾಜ್ಯಪಾಲರಿಗೆ ಸೂಕ್ತ ನಿರ್ದೇಶನಗಳನ್ನು ತಕ್ಷಣವೇ ಹೊರಡಿಸುವಂತೆ ಕೇಂದ್ರವನ್ನು ಆಗ್ರಹಿಸಿದೆ. ರಾಜ್ಯಪಾಲ ಆರ್.ಎನ್.ರವಿ ಅವರು ಜನರ ಕಲ್ಯಾಣಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದರು.

ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ‘ಇದು ನಾನು ರಾಜ್ಯಪಾಲರ ವಿರುದ್ಧ ತರುತ್ತಿರುವ ಎರಡನೇ ನಿರ್ಣಯವಾಗಿದೆ. ರಾಜ್ಯಪಾಲರು ರಾಜಕೀಯದಿಂದ ಪ್ರತ್ಯೇಕವಾದ ವ್ಯಕ್ತಿಯಾಗಿರಬೇಕು ಎಂದು ಸರ್ಕಾರಿಯಾ ಆಯೋಗವು ಹೇಳಿತ್ತು. ರಾಜ್ಯಪಾಲರು ರಾಜ್ಯದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದು ಡಾ. ಅಂಬೇಡ್ಕರ್ ಹೇಳಿದ್ದರು. ರಾಜ್ಯಪಾಲರು ಮಾರ್ಗದರ್ಶಕರಾಗಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಹಲವಾರು ತೀರ್ಪುಗಳು ಹೇಳಿವೆ. ಆದರೆ ನಮ್ಮ ರಾಜ್ಯಪಾಲರು ಜನತೆಯ ಮಿತ್ರನಾಗಲು ಸಿದ್ಧರಿಲ್ಲ’ ಎಂದು ಹೇಳಿದರು.

ರಾಜ್ಯಪಾಲ ರವಿ ಅವರು ಮಸೂದೆಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಸ್ಟಾಲಿನ್, ‘ನಾವು ರಾಜ್ಯಪಾಲರ ಕಾರ್ಯವೈಖರಿಯನ್ನು ಮಾತ್ರ ಟೀಕಿಸುತ್ತಿದ್ದೇವೆ. ವಿಧಾನಸಭೆ ಕಲಾಪಗಳಿಗೆ ಅಡ್ಡಿಯುಂಟಾದರೆ ನಾವು ಮೌನವಾಗಿ ಕುಳಿತುಕೊಳ್ಳುವುದಿಲ್ಲ. ರಾಜ್ಯಪಾಲರು ತನ್ನಿಚ್ಛೆಯಂತೆ ಮಸೂದೆಗಳನ್ನು ತಡೆಯುತ್ತಿದ್ದಾರೆ ಮತ್ತು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ನಾವು ಯಾರನ್ನೂ ಮೆಚ್ಚಿಸಲು ಮಸೂದೆಗಳನ್ನು ತರುವುದಿಲ್ಲ’ ಎಂದು ಹೇಳಿದರು.

ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಆದರೆ ಸದನದಲ್ಲಿ ಮಾತನಾಡಲು ತಮಗೆ ಕಾಲಾವಕಾಶ ನೀಡಲಾಗಿಲ್ಲ ಎಂದು ಆರೋಪಿಸಿ ಎಐಎಡಿಎಂಕೆ ಶಾಸಕರು ಸಭಾತ್ಯಾಗ ನಡೆಸಿದರು.

Similar News